ನಮ್ಮ ದೇಶಕ್ಕೆ ಗುರುಕುಲ ಶಿಕ್ಷಣ ಪದ್ಧತಿ ಬೇಕಿಲ್ಲ : ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು : ಗುರುಕುಲ ಶಿಕ್ಷಣ ವ್ಯವಸ್ಥೆಯು ಒಂದು ವರ್ಣಕ್ಕೆ ಸೀಮಿತವಾಗಿತ್ತು. ನಾವೆಲ್ಲ ಹೊರಗಿದ್ದವರು ಅದಕ್ಕಾಗಿ ನಮ್ಮ ದೇಶಕ್ಕೆ ಗುರುಕುಲ ಶಿಕ್ಷಣ ಪದ್ಧತಿ ಬೇಕಿಲ್ಲ. ಎಲ್ಲರನ್ನು ಒಳಗೊಳ್ಳುವ ಮಾನವೀಯ, ಪ್ರಜಾಪ್ರಭುತ್ವ ಮಾದರಿಯ ಶಿಕ್ಷಣವೇ ಅಗತ್ಯ ಎಂದು ಹಿರಿಯ ಕವಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಸರಕಾರಿ ಕಲಾ ಕಾಲೇಜಿನ ಸಹಯೋಗದೊಂದಿಗೆ ಆಯೋಜಿಸಿದ್ದ ಗಾಂಧಿ ತತ್ವ ಪ್ರಣೀತ ಕಾರ್ಯಕ್ರಮ, ಪ್ರೊ.ಬಿ.ಆರ್.ರಾಮಚಂದೇಗೌಡ ಸಂಸ್ಮರಣೆ ಮತ್ತು ಸಮಾಜಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಹೊತ್ತಿಗೆ ಭಾರತದಲ್ಲಿ ವಿದ್ಯಾವಂತರ ಪ್ರಮಾಣ ಸುಮಾರು ಶೇ.14ರಷ್ಟು ಮಾತ್ರ ಇತ್ತು. ಪಂಚ ವಾರ್ಷಿಕ ಯೋಜನೆಗಳ ನಂತರ ಎಲ್ಲರಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜವಾಹರಲಾಲ್ ನೆಹರೂ ಜಾರಿಗೆ ತಂದಿದ್ದರಿಂದ ಈಗ ಶೇ.80ರಷ್ಟು ದಾಟಲು ಸಾಧ್ಯವಾಗಿದೆ. ಇವುಗಳನ್ನು ಅರ್ಥಪೂರ್ಣವಾಗಿ ಬೆಳೆಸಲು ಸಾಧ್ಯವಾಯಿತು ಎಂದು ವಿವರಿಸಿದರು.
ಭಾರತವೂ ಸೇರಿದಂತೆ ಜಗತ್ತಿನಲ್ಲಿ ಅಸಹನೆ ಮತ್ತು ದ್ವೇಷ ಹೆಚ್ಚಾಗಿದೆ. ಹಿಂಸೆ, ಕ್ರೌರ್ಯಗಳಿಗೆ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಯುದ್ಧವಲ್ಲ ಅಹಿಂಸೆ, ಶಾಂತಿ ಮುಖ್ಯ ಎಂದು ಪ್ರತಿಪಾದಿಸಿದ ಗಾಂಧೀಜಿ ಇಂಥ ಸಮಯದಲ್ಲಿ ಪ್ರಸ್ತುತರಾಗುತ್ತಾರೆ. ನಮ್ಮ ಪೀಳಿಗೆಗೆ ಗಾಂಧಿ ಅರ್ಥವಾಗಿದ್ದರು. ಆದರೆ, ಈಗಿನ ಯುವಪೀಳಿಗೆಗೆ ಗಾಂಧಿಗಿಂತ ಗೋಡ್ಸೆಯೇ ಮುಖ್ಯವಾಗಿರುವುದು ದುರಂತ. ಗಾಂಧಿಜಿಯನ್ನು ಯುವಪೀಳಿಗೆಗೆ ತಲುಪಿಸದೇ ಇರುವುದು ಪ್ರಜಾಪ್ರಭುತ್ವದ ವೈಫಲ್ಯ ಎಂದು ಹೇಳಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಗಾಂಧೀಜಿಯನ್ನು ಅಲ್ಲಗಳೆಯುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು, ಜೈಲಿಗೆ ಹೋದವರು ಅಪ್ರಸ್ತುತರಾಗುತ್ತಿದ್ದಾರೆ. ಹೋರಾಟ ಮಾಡದವರೇ ಇಂದು ದೇಶಪ್ರೇಮಿಗಳಾಗುತ್ತಿದ್ದಾರೆ. 50 ವರ್ಷಗಳಲ್ಲಿ ಗಾಂಧೀಜಿ ಮರೆತುಹೋಗಲಿದ್ದಾರೆ. ನೋಟುಗಳಲ್ಲಿರುವ ಅವರ ಚಿತ್ರವೂ ಮಾಯವಾಗಿ ಬೇರೆಯವರ ಚಿತ್ರ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ತಜ್ಞ ಎನ್.ಸಿ.ಪಟೇಲ್ ಅವರಿಗೆ ಬಿ.ಆರ್. ರಾಮಚಂದ್ರೇಗೌಡ ಸಮಾಜಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಕಲಾ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹಸನ್‍ಖಾನ್ ಕೆ. ಕುಲಕರ್ಣಿ, ರಾಮಚಂದ್ರೇಗೌಡ ಟ್ರಸ್ಟ್‍ನ ಟ್ರಸ್ಟಿಗಳಾದ ಹೊನ್ನಮ್ಮ, ಬಿ.ಆರ್. ಮಮತಾ, ಗಾಂಧಿಭವನ ಕೋಶಾಧ್ಯಕ್ಷ ಎಚ್.ಬಿ. ದಿನೇಶ್, ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ನಾಗೇಶ್.ಜಿ ಉಪಸ್ಥಿತರಿದ್ದರು.