×
Ad

ಶಾಲೆಯ ಕುಡಿಯುವ ನೀರಿಗೆ ವಿಷವಿಕ್ಕಿದ ಪ್ರಕರಣ | ಶಾಲಾ ಮಕ್ಕಳ ಜೀವದೊಂದಿಗೆ ಚೆಲ್ಲಾಟ ಘೋರ ಕೃತ್ಯ : ಎಸ್‍ಐಒ

Update: 2025-08-03 18:13 IST

ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ

ಬೆಂಗಳೂರು : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಮುಸ್ಲಿಮ್ ಸಮುದಾಯಕ್ಕೆ ಸೇರಿದ ಮುಖ್ಯೋಪಾಧ್ಯಾಯರನ್ನು ವರ್ಗಾವಣೆ ಮಾಡಿಸುವ ದುರುದ್ದೇಶದಿಂದ ಕಿಡಿಗೇಡಿಗಳು ರೂಪಿಸಿದ ಸಂಚು ಅತ್ಯಂತ ಆಘಾತಕಾರಿಯಾಗಿದೆ. ಶಾಲೆಯ ನೀರಿನ ಟ್ಯಾಂಕ್‍ಗೆ ವಿಷ ಬೆರೆಸಿ ಮುಗ್ಧ ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡಿರುವ ಈ ಘೋರ ಕೃತ್ಯವನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾದ ರಾಜ್ಯ ಘಟಕ ಬಲವಾಗಿ ಖಂಡಿಸಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಎಸ್‍ಐಒ ಕರ್ನಾಟಕದ ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ ಮುಹಮ್ಮದ್ ಹಯ್ಯಾನ್, ಕಳೆದ 13 ವರ್ಷಗಳಿಂದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮುಖ್ಯೋಪಾಧ್ಯಾಯ ಸುಲೇಮಾನ್ ಗೋರಿನಾಯಕ್ ಅವರನ್ನು ಕೇವಲ ಧರ್ಮದ ಕಾರಣಕ್ಕೆ ಗುರಿಯಾಗಿಸಿ, ಅವರನ್ನು ಅಲ್ಲಿಂದ ಸ್ಥಳಾಂತರಿಸಲು 41 ಮುಗ್ಧ ಮಕ್ಕಳನ್ನು ಕೊಲ್ಲಲು ಯತ್ನಿಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ ಎಂದು ತಿಳಿಸಿದ್ದಾರೆ.

ವಿಷ ಬೆರೆಸಿದ ನೀರನ್ನು ಕುಡಿದು 12 ಮಕ್ಕಳು ಅಸ್ವಸ್ಥರಾಗಿರುವುದು ತೀವ್ರ ಕಳವಳಕಾರಿ ವಿಷಯ. ಒಂದು ನಿರ್ದಿಷ್ಟ ಧರ್ಮದ ಮೇಲಿನ ದ್ವೇಷವು ಮುಗ್ಧ ಮಕ್ಕಳ ಪ್ರಾಣ ತೆಗೆಯುವ ಹೀನ ಮಟ್ಟಕ್ಕೆ ತಲುಪಿರುವುದು ಸಮಾಜದ ಸ್ವಾಸ್ಥ್ಯಕ್ಕೆ ಆತಂಕಕಾರಿ ಬೆಳವಣಿಗೆಯಾಗಿದೆ. ಇದು ನಮ್ಮ ಸಮಾಜದಲ್ಲಿ ದ್ವೇಷ ಮತ್ತು ಅಸಹಿಷ್ಣುತೆ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಪೊಲೀಸರು ಈ ಹೀನಾಯ ಕೃತ್ಯವೆಸಗಿದ ಆರೋಪಿಗಳನ್ನು ಬಂಧಿಸಿರುವುದು ಶ್ಲಾಘನೀಯ. ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಮಾದರಿಯಾಗುವಂತಹ ಶಿಕ್ಷೆ ವಿಧಿಸಬೇಕು. ಅಸ್ವಸ್ಥಗೊಂಡ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸಿ, ಅವರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ರಾಜ್ಯ ಸರಕಾರವನ್ನು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News