ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಕಟ | ತೀರ್ಪು ದುರ್ಬಲವಾಗದಂತೆ ನೋಡಿಕೊಳ್ಳಬೇಕು : ಎನ್‍ಎಫ್‍ಐಡಬ್ಲ್ಯು
ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೇಲ್ಮನವಿ ಹೋದ ಪಕ್ಷದಲ್ಲಿ, ಸದರಿ ತೀರ್ಪನ್ನು ಎತ್ತಿಹಿಡಿಯುವ ಹಾಗೆ ಸರಕಾರಿ ವಕೀಲರು ಈ ಪ್ರಕರಣವನ್ನು ಪ್ರಬಲವಾಗಿ ವಾದಿಸುವಂತೆ ಎಚ್ಚರ ವಹಿಸಬೇಕು. ಕೆಳಹಂತದ ನ್ಯಾಯಾಲಯವು ನೀಡಿರುವ ಈ ತೀರ್ಪು ದುರ್ಬಲವಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್(ಎನ್‍ಎಫ್‍ಐಡಬ್ಲ್ಯು) ರಾಜ್ಯ ಸಮಿತಿ ಆಗ್ರಹಿಸಿದೆ.
ರವಿವಾರ ಎನ್‍ಎಫ್‍ಐಡಬ್ಲ್ಯು ಅಧ್ಯಕ್ಷೆ ಜ್ಯೋತಿ ಎ. ಹಾಗೂ ಕಾರ್ಯದರ್ಶಿ ರೇಣುಕಾ ಕೆ. ಅವರು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದು, ಪ್ರಜ್ವಲ್ ರೇವಣ್ಣ ವಿರುದ್ಧ ಸಲ್ಲಿಸಲಾಗಿದ್ದ ದೋಷಾರೋಪಣಾ ಪಟ್ಟಿಯ ಪೈಕಿ ತಮ್ಮ ಕೆಲಸದಾಕೆಯ ಮೇಲೆ ಅತ್ಯಾಚಾರ ನಡೆಸಿದ ಆಪಾದನೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‍ನಲ್ಲಿ ಸಾಬೀತಾಗಿದೆ. ಆ ಹಿನ್ನೆಲೆಯಲ್ಲಿ ಅವರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.
ಯಾರೊಬ್ಬರ ಹಣ ಮತ್ತು ಅಧಿಕಾರದ ದರ್ಪ, ಹೆಣ್ಣುಮಕ್ಕಳ ಮೇಲೆ ಹಿಂಸೆ, ಕ್ರೌರ್ಯ ಮತ್ತು ದೌರ್ಜನ್ಯ ಎಸಗಲು ಅವರಿಗೆ ಹಕ್ಕು ನೀಡುವುದಿಲ್ಲ ಎಂಬ ಸಂದೇಶವನ್ನು ಈ ತೀರ್ಪು ರವಾನಿಸಿದೆ. ಪ್ರಜಾತಂತ್ರದಲ್ಲಿ ಅಧಿಕಾರ ಶಾಶ್ವತವಲ್ಲ, ಜನರ ಸಾಂವಿಧಾನಿಕ ಹಕ್ಕುಗಳನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಈ ತೀರ್ಪು ಇತರರಿಗೂ ಪಾಠವಾಗಲಿದೆ. ಅಲ್ಲದೆ, ಹೆಣ್ಣಿನ ಘನತೆಗೆ, ಆಕೆಯ ಬದುಕುವ ಹಕ್ಕಿಗೆ ಮತ್ತು ನ್ಯಾಯಕ್ಕೆ ಸಂದ ಜಯ ಎಂದು ಅವರು ವಿಶ್ಲೇಷಿಸಿದ್ದಾರೆ.
ಈ ಪ್ರಕರಣವನ್ನು ಯಶಸ್ವಿಯಾಗಿ ದಿಟ್ಟತನದಿಂದ ದಡ ಮುಟ್ಟಿಸಿದ ನೊಂದ ಮಹಿಳೆ ಮತ್ತು ಆಕೆಯ ಕುಟುಂಬಕ್ಕೂ, ಆಕೆಯ ಬೆಂಬಲಕ್ಕೆ ನಿಂತವರೆಲ್ಲರಿಗೂ, ಪ್ರಾಮಾಣಿಕವಾಗಿ ದುಡಿದ ವಿಶೇಷ ತನಿಖಾ ದಳದ ಸದಸ್ಯರಿಗೂ, ತೀರ್ಪು ನೀಡಿದ ವಿಶೇಷ ನ್ಯಾಯಾಲಯಕ್ಕೂ ಮತ್ತು ನ್ಯಾಯ ಗಳಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ.