×
Ad

ಶಾಲಾ ನೀರಿನ ಟ್ಯಾಂಕ್‍ಗೆ ವಿಷ ಬೆರೆಸಿದ ಪ್ರಕರಣ | ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು ಭೇಟಿ ಮಾಡಿದ ಜಮಾಅತೆ ಇಸ್ಲಾಮಿ ಹಿಂದ್ ನಿಯೋಗ

Update: 2025-08-04 22:41 IST

ಬೆಂಗಳೂರು : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರ ವರ್ಗಾವಣೆಯ ದುರುದ್ದೇಶದಿಂದ ಶಾಲೆಯ ಮಕ್ಕಳು ಕುಡಿಯುವ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ ಪ್ರಕರಣದಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಮಾನವ ಹಕ್ಕುಗಳ ಆಯೋಗವನ್ನು ಜಮಾಅತೆ ಇಸ್ಲಾಮಿ ಹಿಂದ್‍ನ ರಾಜ್ಯ ಘಟಕದ ನಿಯೋಗವು ಭೇಟಿ ಮಾಡಿ, ಸ್ವಯಂ ಪ್ರೇರಿತ ದೂರು ದಾಖಲಿಸಿ, ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಸೂಕ್ತ ಶಿಕ್ಷೆಗೆ ಒಳಪಡಿಸಲು ಆಗ್ರಹಿಸಿತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 15 ದಿನಗಳ ಹಿಂದೆ ನಡೆದ ಈ ಘಟನೆಯಿಂದ ಅನೇಕ ಮಕ್ಕಳು ನೀರು ಕುಡಿದು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ.

ಏನೂ ಅರಿಯದ ಮುಗ್ಧ ಮಕ್ಕಳ ಪ್ರಾಣಕ್ಕೆ ಕುತ್ತು ತರುವ ಈ ಕೃತ್ಯಕ್ಕೆ ಆರೋಪಿಗಳು ಅದೇ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಯನ್ನು ಬಳಸಿಕೊಂಡು ಶಾಲಾ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ್ದು, ಅತ್ಯಂತ ಹೇಯ ಕೃತ್ಯವಾಗಿದೆ, ಇದು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನಿಯೋಗವು ಆತಂಕ ವ್ಯಕ್ತಪಡಿಸಿತು.

ಈ ಹೀನ ಕೃತ್ಯವು ಇಡೀ ನಾಗರಿಕ ಸಮಾಜಕ್ಕೆ ದಿಗ್ಭ್ರಮೆ ಮೂಡಿಸಿದೆ ಮತ್ತು ಶಾಲಾ ವಾತಾವರಣದ ಬಗೆಗೆ ಆತಂಕ ಸೃಷ್ಟಿಯಾಗಿದೆ, ಎಳೆಯ ಮಕ್ಕಳ ಮನಸ್ಸಿನ ಮೇಲೆ ತೀರಾ ನಕಾರಾತ್ಮಕ ಪರಿಣಾಮ ಬೀರಲಿದೆ, ಅಷ್ಟೇ ಅಲ್ಲದೇ ಮಕ್ಕಳ ಪ್ರಾಣದ ಜೊತೆಗೆ ಚೆಲ್ಲಾಟವಾಡುವುದು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ನಿಯೋಗ ತಿಳಿಸಿತು.

ಈ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸರು ನಡೆಸುತ್ತಿರುವ ವಿಚಾರಣೆಯ ಬಗ್ಗೆ ಮಾಹಿತಿ ತರಿಸಿಕೊಂಡು ಪರಿಶೀಲನೆ ನಡೆಸಬೇಕು, ಆರೋಪಿಗಳಿಗೆ ಜಾಮೀನು ರಹಿತ ಪ್ರಕರಣ ದಾಖಲಾಗಬೇಕು ಎಂಬುದನ್ನು ಆಯೋಗವು ಖಚಿತಪಡಿಸಿಕೊಳ್ಳಬೇಕು ನಿಯೋಗವು ಕೋರಿತು.

ಬಹಳ ಪ್ರಮುಖವಾಗಿ ಈ ಘಟನೆ ನಡೆದ ಶಾಲೆಗೆ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನಿಯೋಗವು ಭೇಟಿ ನೀಡಿ ಘಟನೆಯ ಪರಿಪೂರ್ಣ ಮಾಹಿತಿ ಪಡೆದು ಪ್ರಕರಣದ ಆಗು-ಹೋಗುಗಳನ್ನು ಮೇಲ್ವಿಚಾರಣೆ ನಡೆಸಬೇಕು. ಜೊತೆಗೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ಮಕ್ಕಳಿಗೆ ಭೇಟಿಯಾಗಿ ಪೋಷಕರಿಗೆ ಆತ್ಮಸ್ಥೈರ್ಯ ನೀಡಬೇಕೆಂದು ನಿಯೋಗವು ಪತ್ರದ ಮೂಲಕ ಆಗ್ರಹಿಸಿತು.

ನಿಯೋಗವನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಘಟಕದ ಸಹ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ, ಎಸ್.ಐ.ಒ ರಾಜ್ಯ ಕಾರ್ಯದರ್ಶಿ ಹಯಾನ್ ಕುದ್ರೋಳಿ ಪ್ರತಿನಿಧಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News