×
Ad

ಬಾಕಿ ಕಾಮಗಾರಿಗಳ ಬಿಲ್‍ಗೆ ಸ್ಪಂದಿಸುತ್ತಿಲ್ಲ : ಆರ್.ಮಂಜುನಾಥ್

Update: 2025-08-04 22:45 IST

ಬೆಂಗಳೂರು : ಬಾಕಿ ಕಾಮಗಾರಿ ಬಿಲ್‍ಗಳಿಗೆ ಹಣ ಪಾವತಿ ಸಂಬಂಧಪಟ್ಟಂತೆ ಕೆಲ ಸಚಿವರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಜತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆಯಬೇಕಾಗಿರುವ ಸಭೆಗೆ ದಿನಾಂಕ ನಿಗದಿಪಡಿಸಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಕುಂದುಕೊರತೆಗಳ ಕುರಿತು ಚರ್ಚಿಸಲು ಜು.4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ನಿಗದಿಯಾಗಿದ್ದ ಸಭೆ ಮುಂದೂಡಲಾಗಿತ್ತು. ಆದರೆ, ಈವರೆಗೆ ಸಿಎಂ ಅವರಿಂದ ಸಭೆ ದಿನಾಂಕ ನಿಗಯಾಗಿಲ್ಲ ಎಂದು ಹೇಳಿದರು.

ಜಲಸಂಪನ್ಮೂಲ ಸಚಿವರು ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಝಮೀರ್ ಅಹ್ಮದ್ ಖಾನ್, ಎನ್.ಎಸ್.ಭೋಸರಾಜು ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಲು ಆಶ್ವಾಸನೆ ಕೊಟ್ಟರು. ಇದರಲ್ಲಿ ಕೆಲ ಬೇಡಿಕೆಗಳು ಈಡೇರಿವೆ. ಇನ್ನೂ ಹಲವು ಬೇಡಿಕೆಗಳು ಬಗೆಹರಿದಿಲ್ಲ ಎಂದ ಅವರು, ಗುತ್ತಿಗೆದಾರರ ಕುಂದುಕೊರತೆಗಳ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಭೈರತಿ ಸುರೇಶ್ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಎಷ್ಟು ಬಾಕಿ: ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ ಮಾತನಾಡಿ, ಜಲಸಂಪನ್ಮೂಲ ಇಲಾಖೆ 12 ಸಾವಿರ ಕೋಟಿ ರೂ., ಲೋಕೋಪಯೋಗಿ ಇಲಾಖೆ 9 ಸಾವಿರ ಕೋಟಿ ರೂ., ಸಣ್ಣ ನೀರಾವರಿ ಇಲಾಖೆ 3 ಸಾವಿರ ಕೋಟಿ ರೂ., ಆರ್‍ಡಿಪಿಆರ್ 3,800 ಕೋಟಿ ರೂ., ವಸತಿ ಇಲಾಖೆ ಅಧೀನದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ 900 ಕೋಟಿ ರೂ ಹಾಗೂ ನಗರಾಭಿವೃದ್ಧಿ ಇಲಾಖೆ 700 ಕೋಟಿ ರೂ.ಸೇರಿ ವಿವಿಧ ಇಲಾಖೆಗಳಿಂದ ಒಟ್ಟು 32 ಸಾವಿರ ಕೋಟಿ ರೂ.ವೆಚ್ಚದ ಬಿಲ್‍ಗಳು ಬಾಕಿ ಉಳಿದಿವೆ. 2021-22ನೇ ಸಾಲಿನಿಂದ 2024-25ನೆ ಸಾಲಿನ ಅವಧಿಯ ಬಿಲ್‍ಗಳು ಹಣ ಪಾವತಿಯಾಗುತ್ತಿಲ್ಲ. ಗುತ್ತಿಗೆದಾರರ ಬಾಕಿ ಇರುವ ಬಿಲ್‍ಗಳಿಗೆ ಶೇ.50 ಹಣ ಬಿಡಗಡೆ ಮಾಡುವ ಕುರಿತು ಸರಕಾರ ಆಶ್ವಾಸನೆ ಕೊಟ್ಟರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ತಿಳಿಸಿದರು.

7ಕ್ಕೆ ಸತೀಶ್ ಜಾರಕಿಹೊಳಿ ಜೊತೆ ಸಭೆ: ಸತೀಶ್ ಜಾರಕಿಹೊಳಿ ಜೊತೆ ನಡೆಸಿದ್ದ ಸಭೆಯಲ್ಲಿ ಜ್ಯೇಷ್ಠತಾ ಆದಾರದ ಮೇಲೆ ಬಿಲ್‍ಗಳಿಗೆ ಹಣ ಬಿಡುಗಡೆ ಸೇರಿ ಇತರೆ ಸಮಸ್ಯೆಗಳ ಬಗ್ಗೆ ಮನವಿ ಮಾಡಿಕೊಂಡಿದ್ದೆವು. ಇದಕ್ಕೆ ಸಚಿವರು ಸ್ಪಂದಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಜ್ಯೇಷ್ಠತಾ ಮೇರೆಗೆ ಬಿಲ್‍ಗಳಿಗೆ ಹಣ ಬಿಡುಗಡೆಯಾಗುತ್ತಿದೆ. ಆ.7ರಂದು ವಿಕಾಸಸೌಧದಲ್ಲಿ ಸತೀಶ್ ಜಾರಕಿಹೊಳಿ, ಸಂಘದ ಪದಾಧಿಕಾರಿಗಳ ಜೊತೆ ಮತ್ತೆ ಸಭೆ ಕರೆದಿದ್ದಾರೆ ಎಂದು ಆರ್. ಮಂಜುನಾಥ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News