×
Ad

ನನ್ನ 'ಎಕ್ಸ್' ಪೋಸ್ಟನ್ನು ಬೇರೆ ರೀತಿ ವ್ಯಾಖ್ಯಾನಿಸುವುದರಲ್ಲಿ ಅರ್ಥವಿಲ್ಲ: ಡಿ.ಕೆ.ಶಿವಕುಮಾರ್

ರಾಹುಲ್ ಗಾಂಧಿ ನಮ್ಮ ನಾಯಕರು, ಅವರ ಭೇಟಿ ಹೊಸತಲ್ಲ, ಸಹಜ ಪ್ರಕ್ರಿಯೆ

Update: 2026-01-15 15:52 IST

ಡಿ.ಕೆ.ಶಿವಕುಮಾರ್

ಬೆಂಗಳೂರು, ಜ.15: "ಕರ್ನಾಟಕ ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ" ಎಂಬ ನನ್ನ 'ಎಕ್ಸ್' ಪೋಸ್ಟನ್ನು ಬೇರೆ ರೀತಿ ವ್ಯಾಖ್ಯಾನ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಅವರು ಗುರುವಾರ ಸದಾಶಿವ ನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ನನ್ನ 'ಎಕ್ಸ್' ಪೋಸ್ಟ್ ಬಗ್ಗೆ ಕೆಲವು ಮಾಧ್ಯಮಗಳು ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿವೆ. ಕಾವೇರಿ ಆರತಿಯ ಪ್ರಾರ್ಥನೆಗೆ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ. ಮೇಕೆದಾಟು ಯೋಜನೆ ತಾಂತ್ರಿಕ ಅಂಶವನ್ನು ಕೇಂದ್ರ ಜಲ ಆಯೋಗವೇ ತೀರ್ಮಾನ ಮಾಡಬೇಕು ಎಂದು ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ನಾನು ಈ ಮಾತನ್ನು ಹೇಳುತ್ತಾ ಬಂದಿದ್ದೇನೆ. ಇದನ್ನು ಬೇರೆ ರೀತಿ ವ್ಯಾಖ್ಯಾನ ಮಾಡಿದರೆ ಅರ್ಥವಿಲ್ಲ" ಎಂದು ತಿಳಿಸಿದರು.

ರಾಹುಲ್ ಗಾಂಧಿ ಭೇಟಿ ಹೊಸತೇನಲ್ಲ

ರಾಹುಲ್ ಗಾಂಧಿ ಅವರ ಭೇಟಿಗೆ ಸಮಯ ಕೇಳಿದ್ದೀರಾ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, "ರಾಹುಲ್ ಗಾಂಧಿ ಅವರನ್ನು ನಾನು ಭೇಟಿ ಮಾಡುವುದು ಹೊಸತೇನಲ್ಲ. "ನಾಳೆ ದಿಲ್ಲಿಗೆ ಹೋದಾಗ ಎಲ್ಲ ನಾಯಕರು ಅಲ್ಲೇ ಇರುತ್ತಾರೆ. ಭೇಟಿ ಮಾಡುತ್ತೇನೆ"ಎಂದರು.

ರಾಹುಲ್ ಗಾಂಧಿ ಅವರ ಭೇಟಿ ನಂತರ ನಿಮ್ಮ ಬೆಂಬಲಿಗ ಶಾಸಕರು ಸಂತೋಷವಾಗಿದ್ದಾರೆ ಎಂದು ಕೇಳಿದಾಗ, "ಅವರು ನಮ್ಮ ಪಕ್ಷದ ನಾಯಕರು. ನಮ್ಮ ಪಕ್ಷದ ನಾಯಕರನ್ನು, ಅಧ್ಯಕ್ಷರನ್ನು ಭೇಟಿ ಮಾಡುವುದು, ಕರೆ ಮೂಲಕ ಚರ್ಚೆ ಮಾಡುವುದು ಸಹಜ ಪ್ರಕ್ರಿಯೆ. ಅವುಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ನಿಮ್ಮ ಆಪ್ತರ ಬಯಕೆಯನ್ನು ರಾಹುಲ್ ಗಾಂಧಿ ಬಳಿ ಪ್ರಸ್ತಾಪ ಮಾಡುತ್ತೀರಾ ಎಂದು ಕೇಳಿದಾಗ, "ನಿಮ್ಮ (ಮಾಧ್ಯಮಗಳ) ಬಯಕೆಯನ್ನು ಅವರ ಮುಂದೆ ಪ್ರಸ್ತಾಪಿಸುತ್ತೇನೆ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News