ಈ.ಡಿ. ವಿಚಾರಣೆ ಎದುರಿಸಲು ನಮ್ಮ ಕುಟುಂಬ ಸದಾ ಸಿದ್ಧ: ಡಿಸಿಎಂ ಡಿಕೆಶಿ
ಡಿ.ಕೆ.ಶಿವಕುಮಾರ್
ಬೆಂಗಳೂರು, ಜೂ.23: "ಈ.ಡಿ. ವಿಚಾರಣೆ ಎದುರಿಸಲು ನಮ್ಮ ಕುಟುಂಬ ಸದಾ ಸಿದ್ಧ. ಯಾರದ್ದೋ ಹೇಳಿಕೆ ಮೇಲೆ ಡಿ.ಕೆ. ಸುರೇಶ್ ಅವರನ್ನು ವಿಚಾರಣೆಗೆ ಕರೆದಿದ್ದಾರೆ. ಇದನ್ನು ಮಾಧ್ಯಮಗಳು ವೈಭವೀಕರಿಸುವ ಅಗತ್ಯವಿಲ್ಲ”ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ
ಸದಾಶಿವ ನಗರ ನಿವಾಸದ ಬಳಿ ಸೋಮವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಐಶ್ವರ್ಯಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ ಸುರೇಶ್ ಅವರನ್ನು ಈಡಿ ವಿಚಾರಣೆ ಕರೆದಿರುವ ಬಗ್ಗೆ ಕೇಳಿದಾಗ, “ಈ ಹಿಂದೆ ನನ್ನ ಮೇಲೂ ಈಡಿ ಪ್ರಕರಣ ದಾಖಲಿಸಿತ್ತು. ಅದು ಏನಾಯ್ತು? ನಮ್ಮ ರಕ್ಷಣೆಗೆ ಯಾರೂ ಬರಲಿಲ್ಲ. ಕೊನೆಗೆ ನಮಗೆ ರಕ್ಷಣೆ ನೀಡಿದ್ದು ನ್ಯಾಯಾಂಗ ವ್ಯವಸ್ಥೆ. ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನ ಬಂದಾಗ ಅವರನ್ನು ಭೇಟಿ ಮಾಡುವುದು ಸಹಜ. ಈಡಿ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸುರೇಶ್ ತಯಾರಿದ್ದಾರೆ. ಮಾಧ್ಯಮಗಳು ಹೆಚ್ಚು ಆದ್ಯತೆ ನೀಡಬೇಕಾದ ಪ್ರಕರಣಗಳನ್ನು ಬಿಟ್ಟು, ಇದನ್ನು ಹೆಚ್ಚು ಬಿಂಬಿಸಲು ಮುಂದಾಗಿದ್ದೀರಿ. ಇದರ ಅಗತ್ಯವಿಲ್ಲ” ಎಂದು ತಿಳಿಸಿದರು.
ಶಾಸಕ ಬಿ.ಆರ್ ಪಾಟೀಲ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಸದಸ್ಯರು ಕೂಡ ಅಧಿಕಾರಿಗಳು ಹಣ ಪಡೆದಿದ್ದಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಈ ವಿಚಾರವಾಗಿ ಏನು ಹೇಳಬೇಕೋ ಹೇಳಿದ್ದೇನೆ. ಉಳಿದಂತೆ ಈ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ವಸತಿ ಸಚಿವರು ಸ್ಪಷ್ಟನೆ ನೀಡುತ್ತಾರೆ” ಎಂದು ಹೇಳಿದರು.
ಶಾಸಕರ ಗಮನಕ್ಕೆ ಬಾರದೇ ಅನುದಾನ ತೆಗೆದುಕೊಂಡು ಹೋಗಲಾಗುತ್ತಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಯಾರು ಏನು ಹೇಳಿದ್ದಾರೆ ಎಂದು ನನಗೆ ಮಾಹಿತಿ ಇಲ್ಲ” ಎಂದು ಡಿಕೆಶಿ ತಿಳಿಸಿದ್ದಾರೆ.