×
Ad

ಈ ನಾಲ್ಕು ಕಾಯ್ದೆಯಡಿ ಎಫ್ಐಆರ್ ದಾಖಲಿಸಲು ಮೇಲಾಧಿಕಾರಿಗಳ ಅನುಮತಿ ಕಡ್ಡಾಯ: ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಆದೇಶ

Update: 2025-07-25 15:38 IST

ಬೆಂಗಳೂರು, ಜು.25: ಭಾರತೀಯ ನ್ಯಾಯ ಸಂಹಿತೆಯ 111ಯಡಿ (ಸಂಘಟಿತ ಅಪರಾಧ) ಸೇರಿದಂತೆ ನಾಲ್ಕು ಕಾಯ್ದೆಗಳಡಿ ಎಫ್ಐಆರ್ ದಾಖಲಿಸುವ ಮೊದಲು ತನಿಖಾಧಿಕಾರಿಗಳು ಕಡ್ಡಾಯವಾಗಿ ಮೇಲಾಧಿಕಾರಿಗಳ ಅನುಮತಿ ಪಡೆಯುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ-ಐಜಿಪಿ) ಡಾ.ಎಂ.ಎ.ಸಲೀಂ ಸುತ್ತೋಲೆ ಹೊರಡಿಸಿದ್ದಾರೆ.

ಬಿಎನ್ಎಸ್ನ 304, 103(2), 111 ಹಾಗೂ 113(ಬಿ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವ ಮುನ್ನ ಜಿಲ್ಲಾ ಮಟ್ಟದಲ್ಲಿ ಎಎಸ್ಪಿ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ ಹಂತದ ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆದಿರಬೇಕು.

ತುರ್ತು ಕಾರ್ಯಗಳ ನಿಮಿತ್ತ ಮೌಖಿಕವಾಗಿ ಆದೇಶ ಪಡೆದರೆ, 24 ಗಂಟೆಗಳೊಳಗೆ ಲಿಖಿತ ಅನುಮತಿ ಪಡೆದಿರಬೇಕು. ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡಿದ ನಂತರವಷ್ಟೇ ಆ ಕಾಯ್ದೆಗಳಡಿ ಎಫ್ಐಆರ್ ದಾಖಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಏನಿದು ಪ್ರಕರಣಗಳು?

ಬಿಎನ್ಎಸ್ 111: ಸಂಘಟಿತ ಅಪರಾಧ, ಇಬ್ಬರು ಅಥವಾ ಹೆಚ್ಚಿನವರ ಗುಂಪು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗುವುದು.

ಬಿಎನ್ಎಸ್ 103(2): ನಿರ್ದಿಷ್ಟವಾಗಿ ಜನಾಂಗ, ಜಾತಿ, ಸಮುದಾಯ, ಲಿಂಗ, ಜನ್ಮಸ್ಥಳ, ಭಾಷೆ ಅಥವಾ ವೈಯಕ್ತಿಕ ನಂಬಿಕೆಯಂತಹ ಅಂಶಗಳ ಆಧಾರದ ಮೇಲೆ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಗುಂಪು ಒಟ್ಟಾಗಿ ವರ್ತಿಸಿ ಮಾಡುವ ಹತ್ಯೆಗೆ ಶಿಕ್ಷೆಯನ್ನು ವಿಧಿಸುತ್ತದೆ.

ಬಿಎನ್ಎಸ್ 113(ಬಿ): ಭಾರತದ ಏಕತೆ, ಸಮಗ್ರತೆ, ಸಾರ್ವಭೌಮತ್ವ, ಭದ್ರತೆ ಅಥವಾ ಆರ್ಥಿಕ ಭದ್ರತೆಗೆ ಬೆದರಿಕೆ ಹಾಕುವ ಉದ್ದೇಶವನ್ನು ಹೊಂದಿರುವ ಕೃತ್ಯಗಳಲ್ಲಿ ಭಾಗಿಯಾಗುವುದು ಅಥವಾ ಜನರಲ್ಲಿ ಭಯ ಉಂಟುಮಾಡುವ ಸಾಧ್ಯತೆ ಇರುವ ಕೃತ್ಯಗಳಲ್ಲಿ ಭಾಗಿಯಾಗುವಿಕೆ.

ಬಿಎನ್ಎಸ್ 304: ಕಳ್ಳತನದ ಸಲುವಾಗಿ, ಯಾವುದೇ ವ್ಯಕ್ತಿಯಿಂದ ಅಥವಾ ಅವನ ಸ್ವಾಧೀನದಿಂದ ಯಾವುದೇ ಚರ ಆಸ್ತಿಯನ್ನು ದೋಚುವುದು ಅಥವಾ ಕಸಿದುಕೊಳ್ಳುವುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News