×
Ad

13 ವರ್ಷಗಳಿಂದ ಭಾರತಿಯರಿಗೂ ಪ್ರಧಾನಿ ಮೋದಿ ಚಾಕೊಲೇಟ್ ನೀಡುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ

Update: 2026-05-21 13:57 IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಚಾಕೊಲೇಟ್ ನೀಡುತ್ತಿರುವುದು ವಿದೇಶಿ ನಾಯಕರಿಗೆ ಮಾತ್ರವಲ್ಲ, ಕಳೆದ 13 ವರ್ಷಗಳಿಂದ ಭಾರತಿಯರಿಗೂ ಬಗೆಬಗೆಯ, ಬಣ್ಣಬಣ್ಣದ ಚಾಕೊಲೇಟ್ ನೀಡಿದ್ದಾರೆ ಮತ್ತು ನೀಡುತ್ತಲೇ ಇದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕೆ ಮಾಡಿದ್ದಾರೆ.

ಇಟಲಿ ದೇಶಕ್ಕೆ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಆ ದೇಶದ ಪ್ರಧಾನಿ ಜಾರ್ಜಿಯಾ ಮೆಲೋನಿಯವರಿಗೆ ಮೆಲೋಡಿ ಟಾಫಿ ಚಾಕಲೆಟ್ ಪೊಟ್ಟಣವನ್ನು ಉಡುಗೊರೆಯಾಗಿ ನೀಡಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಚಿವ ಖರ್ಗೆ, ಮಕ್ಕಳು ಅಳುವಾಗ ಹೇಗೆ ಚಾಕ್ಲೇಟ್ ನೀಡಿ ಸಮಾಧಾನಿಸುತ್ತಾರೋ ಹಾಗೆಯೇ, ದೇಶದ ಜನ ಸಮಸ್ಯೆಗಳಲ್ಲಿರುವಾಗ ಪ್ರಧಾನಿ ಮೋದಿ 'ಘೋಷಣೆ'ಗಳೆಂಬ ಚಾಕ್ಲೇಟ್ ನೀಡಿ ಸಮಾಧಾನಿಸುವ ಕೆಲಸ ಮಾಡಿದ್ದಾರೆ! ಭಾರತೀಯರು ಈ ಕನಸೆನ್ನುವ ಚಾಕ್ಲೇಟ್ ಗಳನ್ನು ಸವಿಯುತ್ತಾ, ಸಮಾಧಾನಗೊಳ್ಳಬೇಕು! ಎಂದು ವ್ಯಂಗ್ಯವಾಡಿದ್ದಾರೆ.

ಗುಜರಾತ್ ಮಾಡೆಲ್ ಅಚ್ಚೇದಿನ್ ವಿಶ್ವಗುರು ಮೇಕ್ ಇನ್ ಇಂಡಿಯಾ ಖೇಲೋ ಇಂಡಿಯಾ ಅಮೃತ್ ಕಾಲ್ ವಿಕಸಿತ್ ಭಾರತ್ ಸ್ಟಾರ್ಟ್ ಅಪ್ ಇಂಡಿಯಾ ಸ್ಕಿಲ್ ಇಂಡಿಯಾ ಆತ್ಮ ನಿರ್ಭರ ಭಾರತ್ ಬೇಟಿ ಬಚಾವೋ, ಬೇಟಿ ಪಡಾವೋ ಖೇಲೋ ಇಂಡಿಯಾ 20 ಲಕ್ಷ ಕೋಟಿ ಪ್ಯಾಕೇಜ್ ಹೀಗೆ, ಮೋದಿಯವರು ಭಾರತೀಯರಿಗೆ ಕೊಟ್ಟಿರುವ ಘೋಷಣೆಗಳೆಂಬ ಚಾಕ್ಲೇಟ್ ಹಲವಾರು! ಪ್ರತಿ ಚುನಾವಣೆಗೊಂದು ಘೋಷಣೆ, ಪ್ರತಿ ವರ್ಷಕ್ಕೊಂದು ಘೋಷಣೆ, ಪ್ರತಿ ವೈಫಲ್ಯಕ್ಕೊಂದು ಘೋಷಣೆ, ಇವುಗಳು ವಾಸ್ತವವಾಗಿದ್ದು ಮಾತ್ರ ಸೊನ್ನೆ ಎಂದು ಟೀಕಿಸಿದ್ದಾರೆ.

ಭಾರತೀಯರಿಗೆ ಹುಸಿ ಸಂತೋಷವನ್ನು ನೀಡುವ ಈ ಚಾಕ್ಲೇಟ್ ಗಳು ಈಗ ಸಲಹೆಗಳೆಂಬ ಹೊಸ ರೂಪಕ್ಕೆ ತಿರುಗಿವೆ.. ಅಡುಗೆಗೆ ಎಣ್ಣೆ ಬಳಸಬೇಡಿ, ಪೆಟ್ರೋಲ್ ಬಳಕೆ ಕಡಿಮೆಗೊಳಿಸಿ, ಗ್ಯಾಸ್ ಬದಲು ಗಟರ್ ಗ್ಯಾಸ್ ಬಳಸಿ, ವರ್ಕ್ ಫ್ರಮ್ ಹೋಮ್ ಮಾಡಿ, ಬ್ಯುಟಿ ಪಾರ್ಲರ್ ಗೆ ಹೋಗಬೇಡಿ, ರಾಸಾಯನಿಕ ಗೊಬ್ಬರ ಬಳಸದೆ ಕೃಷಿ ಮಾಡಿ, ಇತ್ಯಾದಿ.... ಸಿಹಿ ಚಾಕ್ಲೇಟ್ ನೀಡುತ್ತಿದ್ದ ಮೋದಿಯವರು ಈಗ ಭಾರತೀಯರಿಗೆ ಕಹಿ ಚಾಕ್ಲೇಟ್ ನೀಡಲು ಶುರು ಮಾಡಿದ್ದಾರೆಂದರೆ, ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದೇ ಅರ್ಥ ಎಂದು ಸಚಿವ ಖರ್ಗೆ ಬರೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News