×
Ad

ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದಂತೆ ನೀತಿ ರೂಪಿಸಲು ಆಗ್ರಹ

Update: 2025-06-24 23:39 IST

ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳು ಪ್ರತಿನಿತ್ಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೀದಿಯಲ್ಲಿ ವ್ಯಾಪಾರ ಮಾಡುವುದು ಸಾಂವಿಧಾನಿಕ ಹಕ್ಕು. ರಾಜ್ಯ ಸರಕಾರ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದಂತೆ ‘ಶೂನ್ಯ ತೆರವು ಕಾರ್ಯಾಚರಣೆ’ ನೀತಿಯನ್ನು ಅಳವಡಿಸಬೇಕು ಎಂದು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪರಿಗಳ ಸಂಘ ಆಗ್ರಹಿಸಿದೆ.

ಮಂಗಳವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಎಐಸಿಸಿಟಿಯು ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆಗಾಗಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ವಕೀಲ ವಿನಯ್ ಶ್ರೀನಿವಾಸ್, ರಾಜ್ಯದ ಆರ್ಥಿಕತೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ಪ್ರಮುಖ ಕೊಡುಗೆ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಬಿಎಂಪಿ ಹಾಗೂ ರಾಜ್ಯ ಸರಕಾರದ ನಡೆಯು ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆಯನ್ನುಂಟು ಮಾಡಲು ಹೊರಟಂತಿದೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೋಂದಣಿ ಮಾಡಿಕೊಂಡಿರುವ ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ವಾಹನಗಳನ್ನು ನೀಡಲು ಸಿದ್ದರಿದ್ದೇವೆ. ಆದರೆ ವ್ಯಾಪಾರ ಮಾಡಿಕೊಳ್ಳಲು ಕೆಲವು ಜಾಗಗಳನ್ನು ಗುರುತು ಮಾಡಿದ್ದು, ಅಲ್ಲಿ ಮಾತ್ರ ವ್ಯಾಪಾರ ಮಾಡಿಕೊಳ್ಳಬೇಕು ಎಂದು ಮಾಧ್ಯಮದಲ್ಲಿ ಹೇಳಿಕೆ ನೀಡಿರುವುದು ಮತ್ತು ಬೀದಿ ವ್ಯಾಪಾರಿಗಳೆಲ್ಲರೂ ಸಂಚಾರಿ ವ್ಯಾಪರಿಗಳಾಗುವುದೇ ಬಿಬಿಎಂಪಿಯ ಉದ್ದೇಶ ಎಂದು ಬಿಬಿಎಂಪಿ ವಿಶೇಷ ಆಯುಕ್ತರು ಹೇಳುತ್ತಿರುವ ಹೇಳಿಕೆಗಳಿಂದಾಗಿ ವ್ಯಾಪಾರಿಗಳು ಆತಂಕಗೊಂಡಿದ್ದಾರೆ. ಇವರ ಹೇಳಿಕೆಗಳು ಬೀದಿ ವ್ಯಾಪಾರಿಗಳ ಕಾನೂನಿನ ಹಾಗೂ ನ್ಯಾಯಾಲಯದ ತೀರ್ಪುಗಳ ವಿರುದ್ಧವಾಗಿದೆ ಎಂದು ವಿನಯ್ ಶ್ರೀನಿವಾಸ್ ತಿಳಿಸಿದರು.

ಎಐಸಿಸಿಟಯು ಕಾರ್ಯದರ್ಶಿ ಕ್ಲಿಫ್ಟನ್ ಡಿ.ರೊಝಾರಿಯೋ ಮಾತನಾಡಿ, ಬೆಂಗಳೂರು ನಗರದಲ್ಲಿ ಎಲ್ಲರಿಗೂ ಬದುಕಲು ಹಕ್ಕಿದೆ. ನಗರವನ್ನು ನಿರ್ಮಾಣ ಮಾಡುವುದೇ ಶ್ರಮಿಕ ವರ್ಗದವರು. ಬೀದಿ ವ್ಯಾಪಾರಿಗಳ ಕಾಯಿದೆಯ ಆಶಯದಂತೆ ಯಾವುದೇ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದೇ 'ಶೂನ್ಯ ತೆರವು ಕಾರ್ಯಾಚರಣೆ'ಯ ನೀತಿ ಅಳವಡಿಸಬೇಕು. ಸಮೀಕ್ಷೆಯಲ್ಲಿ ಒಳಗೊಂಡ ಎಲ್ಲ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ವ್ಯಾಪಾರದ ಪ್ರಮಾಣ ಪತ್ರ ವಿತರಿಸಬೇಕು. ಸಮೀಕ್ಷೆಯಿಂದ ಬಿಟ್ಟು ಹೋದ ವ್ಯಾಪಾರಿಗಳಿಗೆ ನೋಂದಣಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಎಲ್ಲ ಮಾರುಕಟ್ಟೆಗಳನ್ನು ಬೀದಿ ವ್ಯಾಪಾರಿಗಳ ನೈಸರ್ಗಿಕ ಮಾರುಕಟ್ಟೆ, 'ಪರಂಪರೆ ಮಾರುಕಟ್ಟೆ'ಗಳನ್ನು ಪಟ್ಟಣ ವ್ಯಾಪಾರ ಸಮಿತಿಗಳ ಮೂಲಕ ಗುರುತಿಸಬೇಕು. ಈ ಸಾಲಿನ ಬಿಬಿಎಂಪಿ ಬಡ್ಜೆಟ್‍ನಲ್ಲಿನಲ್ಲಿ ಬೀದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಹತ್ತು ಕೋಟಿ ರೂ. ಮೀಸಲಿಡಲಾಗಿದೆ. ಇದನ್ನು ಬಳಸುವುದು ಹೇಗೆ ಎಂದು ಬೀದಿ ವ್ಯಾಪಾರಿ ಸಂಘಟನೆಗಳೊಂದಿಗೆ ಚರ್ಚಿಸಬೇಕು. ಬೀದಿ ವ್ಯಾಪಾರಿಗಳಿಗೆ ಕುಡಿಯುವ ನೀರು, ಶೌಚಾಲಯ, ಬೀದಿ ದೀಪ, ಮಳೆ-ಬಿಸಿಲಿನಿಂದ ರಕ್ಷಣೆ ನೀಡಲು ಠಾರ್ಪಾಲ್ ವ್ಯವಸ್ಥೆ ಹಾಗೂ ಗೋದಾಮುಗಳನ್ನು ಒದಗಿಸಬೇಕು. ವ್ಯಾಪಾರಿಗಳ ಸಾಮಾಜಿಕ ಭದ್ರತೆಗಾಗಿ ಪಿಂಚಣಿ ಯೋಜನೆ, ಆರೋಗ್ಯ ವಿಮೆ, ಭವಿಷ್ಯ ನಿಧಿ, ವಿದ್ಯಾರ್ಥಿ ವೇತನ ಸೌಲಭ್ಯತೆಯನ್ನು ಒದಗಿಸಬೇಕು ಎಂದು ಅವರು ಹೇಳಿದರು.

ಬೀದಿ ವ್ಯಾಪಾರಿಗಳ ಕಾಯ್ದೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಎಲ್ಲ ಶಾಸಕರಿಗೆ, ಪೊಲೀಸರಿಗೆ, ಬಿಬಿಎಂಪಿ ಅಧಿಕಾರಿಗಳಿಗೆ ಅರಿವು ಮೂಡಿಸಲು ಕಾರ್ಯಗಾರಗಳನ್ನು ಆಯೋಜಿಸಬೇಕು. ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆಯನ್ನು ಘೋಷಿಸಬೇಕು. ಪಟ್ಟಣ ವ್ಯಾಪಾರ ಸಮಿತಿಗಳಿಗೆ ಕಚೇರಿ ನೀಡಬೇಕು. ಚರ್ಚ್ ಸ್ಟ್ರೀಟ್, ಸೆಂಟ್ ಜಾನ್ಸ್ ರಸ್ತೆ ಮುಂತಾದ ಕಡೆ ಬೀದಿ ವ್ಯಾಪಾರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಕಿರುಕುಳ ನೀಡದಂತೆ ಆದೇಶ ನೀಡಬೇಕು. ರಸ್ತೆ ಅಗಲೀಕರಣ, ಮೆಟ್ರೋ ನಿರ್ಮಾಣ ಮುಂತಾದ ಯೋಜನೆಗಳಿಗೆ ಬೀದಿ ವ್ಯಾಪಾರಿಗಳನ್ನು ಸ್ಥಳಾಂತರಿಸುವ ಮುನ್ನ ಅದನ್ನು ಪಟ್ಟಣ ವ್ಯಾಪಾರ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕ್ಲಿಫ್ಟನ್ ಆಗ್ರಹಿಸಿದರು.

ದಸಂಸ ಮುಖಂಡ ಮಾವಳ್ಳಿ ಶಂಕರ್, ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಬಾಬು, ಎಐಸಿಸಿಟಿಯುನ ನಿರ್ಮಲಾ, ಅಶೋಕ್, ಲೇಖಾ, ವಕೀಲೆ ಪೂರ್ಣಾ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News