ಎರವ ಸಮುದಾಯದ ಪೊನ್ನಣ್ಣ ಕೊಲೆ ಪ್ರಕರಣ : ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆಯಾಗಲಿ: ಸಿಪಿಐ(ಎಂಎಲ್) ಒತ್ತಾಯ
ಬೆಂಗಳೂರು : ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೆಂಬೆ ಬೆಳ್ಳೂರು ಗ್ರಾಮದಲ್ಲಿ ಪಣಿಯೆರ ಪೊನ್ನಣ್ಣರನ್ನು ಪ್ರಬಲ ಸಮುದಾಯದ ವ್ಯಕ್ತಿ ಕೊಲೆ ಮಾಡಿದ್ದು, ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆಯಾಗಬೇಕು ಎಂದು ಸಿಪಿಐ(ಎಂಎಲ್) ಪಕ್ಷವು ಒತ್ತಾಯಿಸಿದೆ.
ಸೋಮವಾರ ಪಕ್ಷವು ಪ್ರಕಟನೆ ಹೊರಡಿಸಿದ್ದು, ಪರಿಶಿಷ್ಠ ಪಂಗಡದ ಎರವ ಸಮುದಾಯಕ್ಕೆ ಸೇರಿದ ಸಾವಿರಾರು ಜನರಂತೆ ಪೊನ್ನಣ್ಣ ಮತ್ತು ಅವರ ಪತ್ನಿ ಗೀತಾ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅವರು ಪೋರುಕೊಂಡ ಬನ್ಸಿ ಪೂಣಚ್ಚರ ತೋಟದಲ್ಲೇ ಇರುವ ‘ಲೈನ್ ಮನೆ’ಯಲ್ಲಿ ವಾಸವಾಗಿದ್ದರು. ಡಿ.27ರಂದು ಪೂಣಚ್ಚರ ಚಿಕ್ಕಪ್ಪ ಪೊರುಕೊಂಡ ಚಿನ್ನಪ್ಪ ಕ್ಷುಲ್ಲಕ ಕಾರಣಕ್ಕೆ ಪಣಿಯೆರ ಪೊನ್ನಣ್ಣನನ್ನು ಹತ್ಯೆಗೈದಿದ್ದಾರೆ ಎಂದು ಮಾಹಿತಿ ನೀಡಿದೆ.
ಕೆಲಸ ಮುಗಿಸಿದ ನಂತರ ಪಣಿಯೆರ ಪೊನ್ನಣ್ಣ ತೋಟದಲ್ಲಿರುವ ಹಲಸಿನ ಮರವನ್ನು ಹತ್ತಿದ್ದಾಗ, ಪೊರುಕೊಂಡ ಚಿನ್ನಪ್ಪ ತಮ್ಮ ಕೋವಿಯಿಂದ ಗುಂಡು ಹಾರಿಸಿ ಕೊಂದುಹಾಕಿದ್ದಾರೆ ಎಂದು ಪಕ್ಷವು ಆರೋಪಿಸಿದೆ.
ಈ ಪ್ರಕರಣದಲ್ಲಿ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ತಪ್ಪಿತಸ್ಥ ಚಿನ್ನಪ್ಪನಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ದಿವಂಗತ ಪೆÇನ್ನಣ್ಣರ ಪತ್ನಿ ಗೀತಾ, ತಂದೆ ತಿಮ್ಮ ಮತ್ತು ತಾಯಿ ಸುಮ್ಮಿ ಅವರಿಗೆ ಕೂಡಲೇ 20 ಲಕ್ಷ ರೂ.ಗಳ ಪರಿಹಾರ ಧನ ನೀಡಬೇಕು ಎಂದು ಸಿಪಿಐ(ಎಂಎಲ್) ಪಕ್ಷವು ಸರಕಾರವನ್ನು ಒತ್ತಾಯಿಸಿದೆ.
ಗೀತಾ ಅವರಿಗೆ ಸರಕಾರಿ ನೌಕರಿ ಒದಗಿಸಬೇಕು. ಪೊನ್ನಣ್ಣ ಅವರ ಕುಟುಂಬಕ್ಕೆ ಮನೆ ಒದಗಿಸಬೇಕು. ಸಮಾಜ ಕಲ್ಯಾಣ ಇಲಾಖೆಯು ಪೊನ್ನಣ್ಣರ ತಮ್ಮನಾದ ಪೂವಣ್ಣನ ಶಿಕ್ಷಣಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಮತ್ತು ಸಾಕ್ಷಿಗಳಿಗೆ ಬೆದರಿಕೆ ವಿರುದ್ಧ ಎಲ್ಲ ರೀತಿಯ ಸೂಕ್ತ ರಕ್ಷಣೆ ನೀಡಬೇಕು. ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳ(ದೌರ್ಜನ್ಯ ತಡೆ) ಕಾಯಿದೆ, 1989ರ ಅಡಿಯಲ್ಲಿರುವ ರಕ್ಷಣೆಗಳು ಮತ್ತು ಸವಲತ್ತುಗಳನ್ನು ಕಟ್ಟುನಿಟ್ಟಾಗಿ ಒದಗಿಸಬೇಕು ಎಂದು ಪಕ್ಷವು ತಿಳಿಸಿದೆ.
ರಾಜ್ಯ ಸರಕಾರವು ಎರವ ಸಮುದಾಯದ ಕ್ರೂರ ಸಾಮಾಜಿಕ ವಾಸ್ತವತೆಯನ್ನು ನಿರ್ಲಕ್ಷಿಸಬಾರದು. ಅವರಿಗೆ ವಸತಿ ಮತ್ತು ಸಾಗುವಳಿಗಾಗಿ ಭೂಮಿಯನ್ನು ಒದಗಿಸಬೇಕು. ಎರವರನ್ನು ತೋಟಗಳಲ್ಲಿನ ‘ಲೈನ್ ಹೌಸಿಂಗ್’ ಪದ್ಧತಿಯಿಂದ ಮುಕ್ತಗೊಳಿಸಬೇಕು. ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಅವಕಾಶಗಳನ್ನು ಕಲ್ಪಿಸಲು ವಿಶೇಷ ಕಾಳಜಿ ವಹಿಸಬೇಕು ಎಂದು ಸಿಪಿಐ(ಎಂಎಲ್) ಪಕ್ಷ ಒತ್ತಾಯಿಸಿದೆ.