ಪಂಚಾಯತ್ ಕೆರೆಗಳ ಮೀನು ಪಾಶುವಾರು ಹಕ್ಕಿನ ಅವಧಿ ಒಂದು ವರ್ಷದ ಅವಧಿಗೆ ವಿಸ್ತರಣೆ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಗೆ ಒಳಪಡುವ ಕೆರೆಗಳಿಗಳಲ್ಲಿನ ಮೀನು ಪಾಶುವಾರು ಹಕ್ಕಿನ ಗುತ್ತಿಗೆ ಅವಧಿಯನ್ನು ಪ್ರಕರಣಕ್ಕನುಗುಣವಾಗಿ ಒಂದು ವರ್ಷದ ಅವಧಿಗೆ ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾ ಪಂಚಾಯತಿಗಳ ಸಿಇಒಗಳಿಗೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಂಗಳವಾರ ಈ ಬಗ್ಗೆ ಮಾಧ್ಯಮ ಪ್ರಕಟನೆ ಹೊರಡಿಸಿರುವ ಅವರು, 11 ರಿಂದ 40 ಹೆಕ್ಟೇರ್ ವರೆಗಿನ ಪಂಚಾಯತ್ ಕೆರೆಗಳಿಗೆ ಸಂಬಂಧಿಸಿದಂತೆ ಮೀನು ಪಾಶುವಾರು ಹಕ್ಕಿನ ಅವಧಿಯನ್ನು 2023-24ನೇ ಸಾಲಿಗೆ ನವೀಕರಿಸಿಕೊಂಡಿರುವ ಗುತ್ತಿಗೆದಾರರು ಹಾಗೂ ಟೆಂಡರುದಾರರುಗಳಿಗೆ ಪ್ರಕರಣಕ್ಕನುಗುಣವಾಗಿ ಒಂದು ವರ್ಷ ಅವಧಿಗೆ ಗುತ್ತಿಗೆಯನ್ನು ಪಾವತಿ ಸಹಿತ ವಿಸ್ತರಿಸುವ ಕುರಿತು ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮೀನುಗಾರಿಕೆ ಇಲಾಖೆಯ ವ್ಯಾಪ್ತಿಗೆ ಒಳಪಡುವ ಕೆರೆಗಳಿಗೆ ಗುತ್ತಿಗೆ ಅವಧಿ ವಿಸ್ತರಿಸಿರುವಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದು ಮೀನು ಪಾಶುವಾರು ಹಕ್ಕಿನ ಗುತ್ತಿಗೆ ಅವಧಿಯನ್ನು ಮತ್ತೂ ಒಂದು ವರ್ಷ ಮುಂದುವರೆಸಲು ಕೋರಿದ್ದರು.