×
Ad

ʼರಾಜ್ಯಗಳ ತೆರಿಗೆ ಪಾಲು ಕಡಿತʼ ಕೇಂದ್ರ ಸರಕಾರದ ಪ್ರಸ್ತಾವನೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ

Update: 2025-02-28 18:00 IST

ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಜ್ಯಗಳ ಗಾಯದ ಮೇಲೆ ಬರೆ ಎಳೆದಿದ್ದಲ್ಲದೆ, ಬಿಸಿನೀರನ್ನೂ ಸುರಿಯುತ್ತಿದೆ ಕೇಂದ್ರ ಸರಕಾರ. ಈಗಾಗಲೇ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರಕಾರದಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ, ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ದ್ರೋಹವಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಈಗ ತೆರಿಗೆ ಪಾಲಿನ ಹಂಚಿಕೆಯಲ್ಲಿ ರಾಜ್ಯಗಳ ಪಾಲನ್ನು ಕಡಿತಗೊಳಿಸಲು ಹಣಕಾಸು ಆಯೋಗಕ್ಕೆ ಕೋರಿಕೆ ಸಲ್ಲಿಸಲು ಮುಂದಾಗಿದೆ, ಇದರಿಂದ ಅತಿ ಹೆಚ್ಚು ಅನ್ಯಾಯಕ್ಕೋಳಗಾಗುವುದು ದಕ್ಷಿಣ ರಾಜ್ಯಗಳು, ಅದರಲ್ಲೂ ಕರ್ನಾಟಕ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಂತ ಹಂತವಾಗಿ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಕಸಿಯುವ ಕೇಂದ್ರ ಸರಕಾರದ ಈ ದುಷ್ಟ ನಡೆಗೆ ರಾಜ್ಯದ ಬಿಜೆಪಿ ನಾಯಕರ ಮೌನವು ಅವರ ಜನದ್ರೋಹವನ್ನು ಸಾಬೀತು ಮಾಡುತ್ತದೆ. ರಾಜ್ಯ ಸರಕಾರವನ್ನು ಪ್ರಶ್ನಿಸುವ ವಿಪಕ್ಷ ನಾಯಕ ಆರ್.ಅಶೋಕ್ ಅವರೇ, ರಾಜ್ಯಗಳ ಅನುದಾನ ಕಡಿತದ ತೀರ್ಮಾನದ ಬಗ್ಗೆ ತಾವೇಕೆ ನಿಮ್ಮ ಮೋದಿಯನ್ನು ಪ್ರಶ್ನಿಸಬಾರದು ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ರಾಜ್ಯದಿಂದಲೇ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯ ಬಿಜೆಪಿ ನಿಯೋಗವು ಭೇಟಿಯಾಗಿ ಈ ತೀರ್ಮಾನದಿಂದ ಹಿಂದೆ ಸರಿಯಲು ಏಕೆ ಒತ್ತಾಯಿಸುತ್ತಿಲ್ಲ? ಕುರ್ಚಿ ಕಿತ್ತಾಟಕ್ಕಾಗಿ ದಿನಕ್ಕೊಬ್ಬೊಬ್ಬರು ದಿಲ್ಲಿ ಯಾತ್ರೆ ಮಾಡುವ ರಾಜ್ಯ ಬಿಜೆಪಿ ನಾಯಕರು ರಾಜ್ಯದ ಹಿತಾಸಕ್ತಿಯ ವಿಷಯದಲ್ಲಿ ದಿಲ್ಲಿ ನಾಯಕರನ್ನು ಭೇಟಿಯಾಗುವುದಿಲ್ಲವೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರೇ, ನಿಮಗೆ ಕರ್ನಾಟಕದ ಹಿತಾಸಕ್ತಿ ಮುಖ್ಯವೊ, ನಿಮ್ಮ ರಾಜಕೀಯ ಹಿತಾಸಕ್ತಿ ಮುಖ್ಯವೋ? ರಾಜ್ಯದ ಏಳಿಗೆಗೆ ಕೇಂದ್ರ ಸರಕಾರ ಪೆಟ್ಟು ನೀಡುತ್ತಿದ್ದರೂ ನಡುಬಗ್ಗಿಸಿ ಶರಣಾಗತಿ ಸೂಚಿಸುವುದನ್ನು ‘ಜನದ್ರೋಹಿ ಗುಲಾಮಗಿರಿ’ ಎನ್ನದೆ ಬೇರೆ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ದೇಶದ ಬೆಳವಣಿಗೆಯಲ್ಲಿ ರಾಜ್ಯಗಳ ಪಾತ್ರ ಪ್ರಮುಖವಾಗಿರುತ್ತದೆ, ಜನಹಿತದ ಯೋಜನೆಗಳನ್ನು ಜಾರಿ ಮಾಡುವುದು ರಾಜ್ಯಗಳ ಹೊಣೆಗಾರಿಕೆ, ರಾಜ್ಯದ ಸಂಪನ್ಮೂಲವನ್ನು ಕೇಂದ್ರ ಸರಕಾರ ಹೀಗೆ ಕೊಳ್ಳೆ ಹೊಡೆದರೆ ರಾಜ್ಯ ಸರಕಾರಗಳು ಏಕಿರಬೇಕು? ಏನು ಮಾಡಬೇಕು? ಬಿಜೆಪಿಗರಿಗೆ ಈ ಪ್ರಶ್ನೆಗಳು ಉದ್ಭವಿಸುವುದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News