×
Ad

ಪ್ರಭುತ್ವದಲ್ಲಿರುವವರ ವರಸೆ ನೋಡಿದರೆ ಮುಂದಿನ 50 ವರ್ಷ ದಲಿತರಿಗೆ ಬಿಕ್ಕಟ್ಟಿನ ಅವಧಿ : ಡಾ.ಪುರುಷೋತ್ತಮ ಬಿಳಿಮಲೆ

Update: 2025-05-03 00:20 IST

ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ಈಗಿನ ಪ್ರಭುತ್ವದಲ್ಲಿರುವವರ ವರಸೆ ನೋಡಿದರೆ ಮುಂದಿನ 50 ವರ್ಷ ದೇಶದ ದಲಿತ ವರ್ಗದವರಿಗೆ ಬಿಕ್ಕಟ್ಟಿನ ಅವಧಿಯಾಗಲಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ದಲಿತರ ಬದುಕು ಹಿಂದಿಗಿಂತ ಹೆಚ್ಚಿನ ದುಸ್ಥಿತಿಗೆ ತಲುಪಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಡಾ.ಪುರುಷೋತ್ತಮ ಬಿಳಿಮಲೆ ಎಚ್ಚರಿಸಿದ್ದಾರೆ.

ಶುಕ್ರವಾರ ನಗರದ ಕಬ್ಬನ್ ಪಾರ್ಕ್‍ನಲ್ಲಿರುವ ಸಚಿವಾಲಯ ಕ್ಲಬ್‍ನಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

20ನೇ ಶತಮಾನದಲ್ಲಿ ಭಾರತೀಯರ ಪೈಕಿ ಅತಿಹೆಚ್ಚು ಪದವಿ ಪಡೆದು ಸಾವಿರಾರು ಪುಸ್ತಕಗಳನ್ನು ಓದಿದ ಮಹಾನ್ ವಿದ್ವಾಂಸ ಡಾ.ಬಿ.ಆರ್.ಅಂಬೇಡ್ಕರ್ ಆಗಿದ್ದಾರೆ. ಜಗತ್ತಿನ ಹತ್ತಾರು ರಾಷ್ಟ್ರಗಳ ಸಂವಿಧಾನ, ವಿವಿಧ ಧರ್ಮಗ್ರಂಥ, ಪ್ರಮುಖ ಸಿದ್ಧಾಂತಗಳನ್ನು ಆಳವಾಗಿ ಅಭ್ಯಾಸ ಮಾಡಿ ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ಮುಂದಾದರು ಎಂದು ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಅತ್ಯಂತ ಗೌರವ ಪಡೆದ ಅಂಬೇಡ್ಕರ್ ಅವರು ಎಲ್ಲ ಭಾರತೀಯರಿಗೂ ಸಮಾನ ಅವಕಾಶ ನೀಡಿರುವುದನ್ನು ದೇಶದ ಶೇ.3ರಷ್ಟಿರುವ ಸಮುದಾಯ ಹಾಗೂ ಕೋಮುವಾದಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಡಿ.ಶಿವಶಂಕರ್, ಸಮಿತಿಯ ಗೌರವಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಡಾ.ಎಸ್. ವಿಜಯಕುಮಾರ್, ಮೋಹನ್, ಕೆಂಪಸಿದ್ದಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News