×
Ad

ಮಳೆ ಹಾನಿ : ಪರಿಹಾರಕ್ಕೆ 1,033 ಕೋಟಿ ರೂ.ಹೆಚ್ಚುವರಿ ಹಣ ಬಿಡುಗಡೆ

Update: 2025-11-27 15:28 IST

PC | X@siddaramaiah

ಬೆಂಗಳೂರು : ಪ್ರಸ್ತುತ ವರ್ಷದ ಮಾನ್ಸೂನ್‌ ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಬ್ಸಿಡಿಗಾಗಿ 1033.60 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಲಾಗಿದ್ದು, ಇಂದು ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಮುಖ್ಯಮಂತ್ರಿ ಅವರು 14.24 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟಾರೆ ಈ ಹಣವನ್ನು ನೇರವಾಗಿ ಜಮಾ ಮಾಡುವ ಕಾರ್ಯಕ್ಕೆ ಬಟನ್ ಒತ್ತಿ ಅಧಿಕೃತವಾಗಿ ಚಾಲನೆ ನೀಡಿದರು.

ರಾಜ್ಯ ಸರ್ಕಾರ ರೈತರ ಪರವಾಗಿದ್ದು, ಬೆಳೆ ಹಾನಿಗೊಳಗಾದವರಿಗೆ ಹೆಚ್ಚಿನ ನೆರವು ಒದಗಿಸಲು ಇನ್ಪುಟ್ ಸಬ್ಸಿಡಿಗಳ ದರಗಳನ್ನು ಹೆಚ್ಚಿಸಿದ್ದು, ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್‌ಗೆ 8,500 ರೂ. ರಿಂದ 17,000ರೂ., ನೀರಾವರಿ ಬೆಳೆಗಳಿಗೆ  17,500 ರೂ. ರಿಂದ 25,500 ರೂ. ಮತ್ತು ಬಹುವಾರ್ಷಿಕ ಬೆಳೆಗಳಿಗೆ 22,500 ರೂ. ರಿಂದ 31,000 ರೂ. ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಎಸ್ಡಿಆರ್ಎಫ್ ಮಾನದಂಡಗಳ ಪ್ರಕಾರ ಈಗಾಗಲೇ 14.24 ಲಕ್ಷ ರೈತರಿಗೆ 1,218.03 ರೂ. ಕೋಟಿ ವಿತರಿಸಲಾಗಿದ್ದು, ರಾಜ್ಯ ನಿಧಿಯಿಂದ 1,033.60 ಕೋಟಿ ರೂ.ವನ್ನು ಟಾಪ್ ಅಪ್ ರೂಪದಲ್ಲಿ ನೀಡಲಾಗುತ್ತಿದೆ. ಒಟ್ಟಾರೆಯಾಗಿ 2,251.63 ಕೋಟಿ ರೂ. ಪರಿಹಾರ ಪಾವತಿ ಪ್ರಕ್ರಿಯೆಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗಲಿದೆ ಎಂದರು.

ಮುಂಗಾರು ಅವಧಿಯಲ್ಲಿ ದಾಖಲೆಯ 82.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ 14.58 ಲಕ್ಷ ಹೆಕ್ಟೇರ್ಗಿಂತ ಹೆಚ್ಚಿನ ಪ್ರದೇಶದ ಬೆಳೆ ಹಾನಿ ಉಂಟಾಗಿದ್ದು, ಇದರಿಂದ ಅಂದಾಜು 10,748 ಕೋಟಿ ರೂ. ಬೆಳೆ ಹಾನಿ ಅಂದಾಜಿಸಲಾಗಿದೆ.

ಮುಖ್ಯವಾಗಿ ತೊಗರಿ ಬೇಳೆ 5.36 ಲಕ್ಷ ಹೆಕ್ಟೇರ್, ಹೆಸರು ಕಾಳು 2.63 ಲಕ್ಷ ಹೆಕ್ಟೇರ್, ಹತ್ತಿ 2.68 ಲಕ್ಷ ಹೆಕ್ಟೇರ್ ಮತ್ತು ಮೆಕ್ಕೆಜೋಳ 1.21 ಲಕ್ಷ ಹೆಕ್ಟೇರ್ ಹಾನಿ ಉಂಟಾಗಿದೆ. ಒಂಭತ್ತು ಜಿಲ್ಲೆಗಳಲ್ಲಿ ಹೆಚ್ಚಿನ ಬೆಳೆ ಹಾನಿ ಉಂಟಾಗಿದ್ದು, ಮುಖ್ಯವಾಗಿ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಬೆಳೆಗಳು ಕೊಯ್ಲಿನ ಹಂತಕ್ಕೆ ಬಂದ ಸಂದರ್ಭದಲ್ಲಿ ಭಾರೀ ಮಳೆಯಿಂದ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಹೇಳಿದರು.

ಕೃಷ್ಣಾ ಮತ್ತು ಭೀಮಾ ಜಲಾನಯನ ಪ್ರದೇಶಗಳಲ್ಲಿ ನಿರಂತರ ಒಳ ಹರಿವು ಹೆಚ್ಚಳದಿಂದ ಕಲಬುರಗಿ, ಯಾದಗಿರಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ತೊಗರಿ ಮತ್ತು ಹತ್ತಿ ಬೆಳೆಗಳಿಗೆ ವ್ಯಾಪಕ ಹಾನಿ ಉಂಟಾಗಿದ್ದು, ಬೆಳೆ ಹಾನಿಯನ್ನು ನಿಖರವಾಗಿ ಖಚಿತಪಡಿಸಲು ಜಂಟಿ ಸಮೀಕ್ಷೆ ನಡೆಸಿ ಹಾನಿಯನ್ನು ಅಂದಾಜಿಸಲಾಗಿದೆ. ಎಲ್ಲಾ ದತ್ತಾಂಶಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಭೂಮಿ ಮತ್ತು ಫ್ರೂಟ್ಸ್ ತಂತ್ರಾಂಶದಲ್ಲಿ ಸಂಯೋಜಿಸಲಾಗಿದೆ ಎಂದರು.

ಹಾನಿಗೊಳಗಾದ ಗ್ರಾಮಗಳ ಪಟ್ಟಿಗಳನ್ನು ಗ್ರಾಮ ಚಾವಡಿಗಳಲ್ಲಿ ಹಾಗೂ ಆನ್ಲೈನ್‌ನಲ್ಲಿ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ ನಂತರ ಅಂತಿಮ ಪಟ್ಟಿಯ ಆಧಾರದಲ್ಲಿ ಸಬ್ಸಿಡಿ ಪಾವತಿಗಳನ್ನು ನೇರವಾಗಿ ರೈತರಿಗೆ ವರ್ಗಾಯಿಸಲಾಗುತ್ತಿದೆ. ಪ್ರಧಾನಿ ಮಂತ್ರಿಯವರನ್ನು ನ.17 ರಂದು ಭೇಟಿ ಮಾಡಿ ಇನ್ಪುಟ್ ಸಬ್ಸಿಡಿಗೆ 614.90 ಕೋಟಿ ರೂ. ಮತ್ತು ಮೂಲಸೌಕರ್ಯ ನಷ್ಟ ಪರಿಹಾರಕ್ಕೆ PDNA ಅಡಿಯಲ್ಲಿ 1,521.67 ಕೋಟಿ ರೂ. ನೀಡಲು ಮನವಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರವು ಸಹ ಅಂತರ ಸಚಿವಾಲಯದ ತಂಡವನ್ನು ರಚಿಸಿ ಶೀಘ್ರದಲ್ಲೇ ಕರ್ನಾಟಕಕ್ಕೆ ಹಾನಿ ಪರಿಶೀಲನೆಗಾಗಿ ಭೇಟಿ ನೀಡಲಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News