×
Ad

ಬೆಂಗಳೂರಿನಲ್ಲಿ ಮಳೆ ನೀರು ಸಮಸ್ಯೆ; ಅಧಿಕಾರಿಗಳಿಗೆ ರಾಮಲಿಂಗಾರೆಡ್ಡಿ ತರಾಟೆ

Update: 2025-05-20 23:47 IST

ಬೆಂಗಳೂರು: ಮಳೆಯಿಂದಾಗಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಪ್ರಮುಖವಾಗಿ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಸರ್ಕಲ್‍ನಲ್ಲಿ ಸ್ಥಳ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಥಳೀಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದರು.

ಮಂಗಳವಾರ ಇಲ್ಲಿನ ಬಿಟಿಎಂ ಲೇಔಟ್ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳ ಪರಿಶೀಲನೆ ನಡೆಸಿದ ಅವರು, ತಕ್ಷಣವೇ ನೀರಿನ ಹರಿವು ಸರಾಗವಾಗಲು ರಾಜಕಾಲುವೆ, ಒಳಚರಂಡಿ ಹಾಗೂ ಇತರ ವ್ಯವಸ್ಥೆಗಳನ್ನು ಮುಕ್ತಗೊಳಿಸಬೇಕು ಎಂದು ಸೂಚಿಸಿದರು.

ಈ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಯಿಂದಾಗಿ ನೀರಿನ ಹರಿವಿಗೆ ತಡೆಯುಂಟು ಮಾಡಲಾಗಿತ್ತು. ಕಳೆದ ವರ್ಷ ಇದೇ ಜಾಗದಲ್ಲಿ ಒಬ್ಬ ವ್ಯಕ್ತಿ ಮಳೆಯಿಂದಾಗಿ ಮೃತಪಟ್ಟಿದ್ದರು. ಆದರೂ ನೀವು ಎಚ್ಚೆತ್ತುಕೊಂಡಿಲ್ಲ. ನೀರಿನ ಹರಿವಿಗೆ ಅಡ್ಡಲಾಗಿರುವ ತಡೆಗಳನ್ನು ಏಕೆ ತೆರವು ಮಾಡಿಲ್ಲ. ಇದರಿಂದಾಗಿ ಜನ ಸಮಸ್ಯೆ ಅನುಭವಿಸುವಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ನೀರು ನಿಂತು ಪರದಾಡುತ್ತಿದ್ದರೆ ಮೆಟ್ರೋ ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಕೊನೆಗೆ ನಾವೇ ಜೆಸಿಬಿ ತಂದು ಅಡೆತಡೆಗಳನ್ನು ತೆರವು ಮಾಡಬೇಕಾದ ಪರಿಸ್ಥಿತಿಯಿದೆ. ಅದಕ್ಕೂ ಸಹಕಾರ ನೀಡುವುದಿಲ್ಲ. ಫೋನ್‍ಗೂ ಸಿಗುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಚಿವರ ಮುಂದೆ ಸ್ಥಳೀಯರು ಆಕ್ರೋಶ ಹೊರಹಾಕಿದರು.

ಆಗ ಸಚಿವ ರಾಮಲಿಂಗಾರೆಡ್ಡಿ, ಏನು ಕೆಲಸ ಮಾಡುತ್ತೀರಾ? ನಿಮ್ಮ ಬೇಜವಾಬ್ದಾರಿ ಯಿಂದ ಒಬ್ಬ ಮೃತಪಟ್ಟ ಬಳಿಕವೂ ನೀವು ಎಚ್ಚೆತ್ತುಕೊಂಡಿಲ್ಲ ಎಂದರೆ ನಿಮ್ಮ ಉದ್ದೇಶಗಳೇನು? ಎಂದು ಮೆಟ್ರೋ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News