×
Ad

ವಿಜಯೇಂದ್ರ ವಿದೂಷಕನ ಪಾತ್ರ ಹಾಕಿದರೆ ಜನರ ಮನ್ನಣೆ ಸಿಗಬಹುದು : ರಮೇಶ್ ಬಾಬು ಲೇವಡಿ

Update: 2025-02-19 20:37 IST

ರಮೇಶ್ ಬಾಬು

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಟಕದ ಕಂಪೆನಿ ಸೇರಿ ವಿದೂಷಕನ ಪಾತ್ರ ಹಾಕಿದರೆ ಜನರ ಮನ್ನಣೆ ಸಿಗಬಹುದು ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಲೇವಡಿ ಮಾಡಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ವಿದೂಷಕನ ಪಾತ್ರವನ್ನು ಯಾರು ವಹಿಸಬೇಕು ಎಂಬುದಕ್ಕೆ ಅವರಲ್ಲಿಯೇ ಪೈಪೋಟಿ ಬಿದ್ದಿದೆ. ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರು ಈ ರೇಸ್‍ನಲ್ಲಿದ್ದಾರೆ. ಅವರಲ್ಲಿ ವಿಜಯೇಂದ್ರ ವಿದೂಷಕನ ಪಾತ್ರ ಹಾಕಿದರೆ ಸ್ವಲ್ಪ ಜನ ಮನ್ನಣೆ ಸಿಗಬಹುದು ಎಂದರು.

ರಾಜಕೀಯದಲ್ಲಿ ತಮ್ಮ ತಂದೆಯವರಾದ ಯಡಿಯೂರಪ್ಪ ಅವರ ಹೆಸರನ್ನು ಹೇಳಿಕೊಂಡು ಬೆಳೆಯುತ್ತಿರುವ ವಿಜಯೇಂದ್ರ ಅವರು ಒಬ್ಬ ರಾಜಕಾರಣಿಯ ಪಾತ್ರವನ್ನು ವಹಿಸಲಿ. ಆದರೆ ವಿದೂಷಕನ ಪಾತ್ರ ಮಾತ್ರ ವಹಿಸಬೇಡಿ ಎಂದು ರಮೇಶ್ ಬಾಬು ಹೇಳಿದರು.

ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರು ತಮ್ಮಲ್ಲಿರುವ ಉಳುಕನ್ನು ಮುಚ್ಚಿಕೊಳ್ಳಲು ಆಗದೇ ಪದೇ, ಪದೇ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುತ್ತಿದ್ದಾರೆ. ಈ ಕೆಲಸವನ್ನು ಆರು ತಿಂಗಳಿನಿಂದ ಮಾಡುತ್ತಿದ್ದಾರೆ. ಈ ಮೂರು ಬಿಜೆಪಿಯಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ವಿನಾಃಕಾರಣ ಆರೋಪ ಮಾಡುತ್ತಿದ್ದಾರೆ ಎಂದು ರಮೇಶ್ ಬಾಬು ದೂರಿದರು.

ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ, ನಾಯಕರ ಮೇಲೆ ಬಿಜೆಪಿಯವರು ಟೀಕೆ ಮಾಡುವ ಅವಶ್ಯಕತೆಯಿಲ್ಲ. ನಮ್ಮ ಜನರಿಗೆ ಯಾವ ಕಾರ್ಯಕ್ರಮಗಳನ್ನು ನೀಡಬೇಕು ಎನ್ನುವ ಅರಿವು ಕಾಂಗ್ರೆಸ್ ಸರಕಾರಕ್ಕಿದೆ ಎಂದು ರಮೇಶ್ ಬಾಬು ತಿಳಿಸಿದರು.

ಕಾಂಗ್ರೆಸ್‍ನಲ್ಲಿ ಕ್ಷಿಪ್ರಕ್ರಾಂತಿ ಆಗುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಆದರೆ, ಅವರ ಪಕ್ಷದಲ್ಲಿ ಆಗುವ ಕ್ಷಿಪ್ರ ಕ್ರಾಂತಿಗಳನ್ನು ಅವರು ಮೊದಲು ತಡೆಯಲಿ. ವಿಜಯೇಂದ್ರ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ದಿನದಿಂದಲೂ ಕಾಂಗ್ರೆಸ್ ಸರಕಾರ ಬಿದ್ದು ಹೋಗುತ್ತದೆ ಎಂದು ಹೇಳುತ್ತಿದ್ದಾರೆ. ಅವರ ಸ್ಥಾನವೇ ಬಿದ್ದು ಹೋಗುವ ಸ್ಥಿತಿಯಲ್ಲಿದೆ ಎಂದು ರಮೇಶ್ ಬಾಬು ಟೀಕಿಸಿದರು.

‘ಮುಡಾ ಪ್ರಕರಣದ ಕುರಿತಾದ ಲೋಕಾಯುಕ್ತ ವರದಿ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಮೇಶ್ ಬಾಬು, ಎಚ್.ಡಿ.ಕುಮಾರಸ್ವಾಮಿಯವರು ಈ ರೀತಿ ಅನುಮಾನ ವ್ಯಕ್ತಪಡಿಸುವುದರಲ್ಲಿ ಅತಿಶಯೋಕ್ತಿಯಿಲ್ಲ. ಆದರೆ, ಅವರ ಮನೆಯವರ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಾರೆ. ಈ ಮನೋರೋಗವನ್ನು ಅವರು ಸರಿಪಡಿಸಿಕೊಳ್ಳಲಿ. ಕುಮಾರಸ್ವಾಮಿ ಅವರ ಮನೆಯಲ್ಲಿಯೂ ಕ್ಷಿಪ್ರಕ್ರಾಂತಿಯಾಗಿದೆ ಅದನ್ನು ಅವರು ಮೊದಲು ಸರಿಪಡಿಸಿಕೊಳ್ಳಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್, ಕಾನೂನು ಘಟಕದ ಉದಾಧ್ಯಕ್ಷ ಆನಂದ್, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ್ಯ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News