ಮಣಿಪುರದಲ್ಲಿ ಕೇಂದ್ರ ಪ್ರಾಯೋಜಿತ ಗಲಭೆಗಳು ಇನ್ನೂ ನಡೆಯುತ್ತಿವೆ : ರಮೇಶ್ ಬಾಬು
ಬೆಂಗಳೂರು : ಪ್ರಧಾನಿ ಮೋದಿಯವರ 11 ವರ್ಷಗಳ ಆಡಳಿತಾವಧಿಯಲ್ಲಿ ಇಡೀ ದೇಶದಲ್ಲಿ ಸುಮಾರು 2 ಸಾವಿರ ಜನರು ಕಾಲ್ತುಳಿತದಿಂದಾಗಿ ಸತ್ತಿದ್ದಾರೆ. ಮಣಿಪುರದಲ್ಲಿ ಕೇಂದ್ರ ಸರಕಾರ ಪ್ರಾಯೋಜಿತ ಗಲಭೆಗಳು ಇನ್ನೂ ನಡೆಯುತ್ತಿವೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರಕಾರದ ರಾಜೀನಾಮೆ ಕೇಳುವ ವಿಪಕ್ಷಗಳ ನಾಯಕರೇ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಉಂಟಾದ ಸಾವುಗಳಿಗೆ ಯಾವಾಗ ರಾಜಿನಾಮೆ ಕೇಳುತ್ತೀರಿ? ಎಂದು ಪ್ರಶ್ನಿಸಿದರು.
ಕರ್ನಾಟಕದ ಇತಿಹಾಸದಲ್ಲಿ ಮೊದಲ ಕಾಲ್ತುಳಿತ ಉಂಟಾಗಿದ್ದೇ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ. ಡಾ.ರಾಜಕುಮಾರ್ ನಿಧನವಾದಾಗ ಅಂತಿಮ ದರ್ಶನ ಪಡೆಯಲು ಸುಮಾರು 6-7 ಲಕ್ಷ ಬರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಯಾವುದೇ ಸೂಕ್ತ ವ್ಯವಸ್ಥೆಗಳನ್ನು ಮಾಡದ ಪರಿಣಾಮ ಲಾಠಿಚಾರ್ಜ್, ಗೋಲಿಬಾರ್ ನಡೆದು ಎಂಟು ಮಂದಿ ತಮ್ಮ ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ಅವರು ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷವಾಗಿ ಕೆಲಸ ಮಾಡುವಲ್ಲಿ ಬಿಜೆಪಿಯವರು ಅಸಮರ್ಥರು. ಅದಕ್ಕಾಗಿಯೇ ಕುಮಾರಸ್ವಾಮಿಯನ್ನು ಮುಂದಿಟ್ಟುಕೊಂಡು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿಗೆ ನರೇಂದ್ರ ಮೋದಿ ಕೆಲಸವೇ ಇಲ್ಲದಂತೆ ಮಾಡಿದ್ದಾರೆ ಅನ್ನಿಸುತ್ತಿದೆ. ಕೇವಲ ಪತ್ರಿಕಾಗೋಷ್ಠಿ ಮಾಡೋದು, ಎಕ್ಸ್ ಅಲ್ಲಿ ಬರೆಯುವುದೇ ಅವರ ಪೂರ್ಣಾವಧಿ ಕೆಲಸವಾಗಿ ಹೋಗಿದೆ ಎಂದು ರಮೇಶ್ ಬಾಬು ಟೀಕಿಸಿದರು.
ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಅಂದು ಲಕ್ಷಾಂತರ ಜನ ಸೇರಿ ಅವ್ಯವಸ್ಥೆ ಆಗಿದ್ದರೂ ಸರಕಾರ ಗೋಲಿಬಾರ್‍ಗೆ ಅವಕಾಶ ನೀಡಿಲ್ಲ. ನ್ಯಾ.ನಾಗಮೋಹನ್ ದಾಸ್ ಅವರನ್ನೂ ಕುಮಾರಸ್ವಾಮಿ ಟೀಕಿಸಿದ್ದಾರೆ. ಅವರ ಮಗನ ಸಾಲು, ಸಾಲು ಸೋಲು ಅವರನ್ನು ಕಂಗೆಡಿಸಿದೆ. ನಿಮ್ಮ ಅಣ್ಣನ ಮಗನ ಕೃತ್ಯದಿಂದ ನೊಂದವರ ಬಳಿಯೂ ನೀವು ಕ್ಷಮೆ ಕೇಳಿದವರಲ್ಲ ಎಂದು ರಮೇಶ್ ಬಾಬು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮಯ್ಯ ಮಾತನಾಡಿ, ಪೊಲೀಸ್ ಅಧಿಕಾರಿಗಳ ಮೇಲೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡಕ್ರಮ ತೆಗೆದುಕೊಂಡಿರುವುದು. ಕರ್ತವ್ಯ ಲೋಪದ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ವಿಧಾನಸೌಧದಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳು ಕಂಡು ಬರಲಿಲ್ಲ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾರ್ಯಕ್ರಮದಲ್ಲಿ ಗೊಂದಲ ಉಂಟಾಗಿ ಅನಾಹುತವಾಗಿದೆ. ಗೇಟ್ ತೆರೆಯುವ ಸಂಬಂಧ ಹಾಗೂ ಉಚಿತ ಪಾಸ್ ಹೀಗೆ ಹಲವಾರು ಕಾರಣಗಳಿವೆ. ಇದಕ್ಕೆ ಡಿ.ಕೆ.ಶಿವಕುಮಾರ್ ಹೊಣೆಗಾರರಾಗುತ್ತಾರೆಯೇ? ಎಂದು ಪ್ರಶ್ನಿಸಿದರು.
ಬಿಜೆಪಿಯ ಅಶ್ವಿನ್ ವೈಷ್ಣವ್ ರೈಲ್ವೇ ಸಚಿವರಾಗಿದ್ದಾರೆ. ಒಂದು ವರ್ಷದಲ್ಲಿ 200ಕ್ಕೂ ಹೆಚ್ಚು ರೈಲು ಅಪಘಾತಗಳಾಗಿವೆ. ಈ ಮನುಷ್ಯ ನಾಟಕಕ್ಕಾಗಿಯಾದರೂ ರಾಜಿನಾಮೆ ನೀಡುತ್ತೇನೆ ಎಂದು ಹೇಳಿದ್ದಾರಾ? ಎಂದು ಪ್ರಶ್ನಿಸಿದ ದೀಪಕ್ ತಿಮ್ಮಯ್ಯ, ಕುಂಭಮೇಳದಲ್ಲಿ ಕಾಲ್ತುಳಿತ ನಡೆದರೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಪ್ಪಿಲ್ಲ. ಇಲ್ಲಿ ಕರ್ನಾಟಕದಲ್ಲಿ ವಿಪಕ್ಷಗಳದ್ದು ಬೇರೆಯದೇ ನಿಲುವು. ಹೇಗಾದರೂ ಮಾಡಿ ಸರಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂದು ಹೀಗೆ ಮಾಡಲಾಗುತ್ತಿದೆ ಎಂದರು.
ಯಾರೂ ಸಹ ಸುಮ್ಮನೆ ಅಧಿಕಾರಿಗಳನ್ನು ಅಮಾನತು ಮಾಡಲು ಸಾಧ್ಯವಿಲ್ಲ. ಅದಕ್ಕೂ ಒಂದು ಕಾನೂನು ಪ್ರಕ್ರಿಯೆ ಇದೆ. ಪ್ರಶ್ನಿಸುವುದಕ್ಕೆ ನ್ಯಾಯಾಲಯ ಇದೆ. ಇನ್ನು ಮುಂದಕ್ಕೆ ಹೀಗಾಗದಂತೆ ಜನ ಹಾಗೂ ಸರಕಾರ ಎರಡೂ ಸೇರಿ ಕೆಲಸ ಮಾಡಬೇಕು. ಕಾಂಗ್ರೆಸ್ ಸರಕಾರ ಎಲ್ಲಿಯೂ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿಲ್ಲ. ಈಗಾಗಲೇ ತನಿಖಾ ಸಮಿತಿ ನೇಮಿಸಿದೆ. ಇದರ ಬಗ್ಗೆ ಕೊಂಚ ತಾಳ್ಮೆಯಿಂದ ಇರಬೇಕು ಎಂದು ದೀಪಕ್ ತಿಮ್ಮಯ್ಯ ಹೇಳಿದರು.