×
Ad

ಬೆಂಗಳೂರು | ಯುವತಿಗೆ ಹಲ್ಲೆ ನಡೆಸಿದ ರ‍್ಯಾಪಿಡೋ ಬೈಕ್‍ ಟ್ಯಾಕ್ಸಿ ಸವಾರ: ಎಫ್‍ಐಆರ್ ದಾಖಲು

Update: 2025-06-16 19:15 IST

Screengrab: X

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿರುವುದನ್ನು ಪ್ರಶ್ನಿಸಿದ್ದಕ್ಕೆ ಯುವತಿ ಮೇಲೆ ಹಲ್ಲೆ ನಡೆಸಿದ ರ‍್ಯಾಪಿಡೋ ಬೈಕ್‍ಟ್ಯಾಕ್ಸಿ ಸವಾರನ ವಿರುದ್ಧ ಇಲ್ಲಿನ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಹಲ್ಲೆಗೊಳಗಾದ ಯುವತಿ ಶ್ರೇಯಾ ಎಂಬಾಕೆ ನೀಡಿದ ದೂರಿನನ್ವಯ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸವಾರ ಸುಹಾಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಫ್‍ಐಆರ್ ನಲ್ಲೇನಿದೆ?:

‘ಜೂ.13ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬಿಟಿಎಂ ಲೇಔಟ್‍ನಿಂದ ಜಯನಗರ 3ನೇ ಬ್ಲಾಕ್‍ಗೆ ಹೋಗಲು ರ‍್ಯಾಪಿಡೋ ಬುಕ್ ಮಾಡಿದ್ದೆ. ಗಮ್ಯ ಸ್ಥಳಕ್ಕೆ ತಲುಪಿದ ಬಳಿಕ ಸಂಚಾರ ನಿಯಮ ಉಲ್ಲಂಘಿಸಿ ಚಾಲನೆ ಮಾಡಿರುವುದು ಕಾನೂನುಬಾಹಿರ ಎಂದು ಬೈಕ್ ಸವಾರನಿಗೆ ಹೇಳಿದೆ. ಇದಕ್ಕೆ ಕಿಡಿಕಾರಿದ ಸವಾರ, ಸಾರ್ವಜನಿಕ ಸ್ಥಳದಲ್ಲಿ ತನ್ನೊಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೈಗಳಿಂದ ಹಲ್ಲೆ ಮಾಡಿದ್ದ. ಈ ಬಗ್ಗೆ ದೂರು ನೀಡಲು ಇಷ್ಟವಿಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದದ ವಿಡಿಯೋ ವೈರಲ್ ಆಗಿದ್ದರಿಂದ ಸ್ನೇಹಿತರು ಸೂಚಿಸಿದ್ದರಿಂದ ಪೊಲೀಸರಿಗೆ ದೂರು ನೀಡಿದೆ’ ಎಂದು ಯುವತಿ ತಿಳಿಸಿದ್ದಾಳೆ.

ಸುರಕ್ಷಿತವಾಗಿ ವಾಹನ ಚಾಲನೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಯುವತಿ ಪ್ರಶ್ನಿಸಿದ್ದಕ್ಕೆ ವಾಗ್ವಾದ ಮಾಡಿ ಸವಾರ ಹಲ್ಲೆ ಮಾಡಿದ್ದಾನೆ. ಘಟನೆ ಬಳಿಕ ಕುಟುಂಬಸ್ಥರ ಸಲಹೆ ಮೇರೆಗೆ ಚಾಲಕನ ವಿರುದ್ಧ ಯುವತಿಯು ಜಯನಗರ ಠಾಣೆಯಲ್ಲಿ ದೂರು ನೀಡಿದ್ದು, ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರ ದಕ್ಷಿಣ ವಿಭಾಗದ ಡಿಸಿಪಿ ಲೊಕೇಶ್ ಜಗಲಾಸರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News