‘ಕಸದ ಶುಲ್ಕ’ದ ಮೂಲಕ ಜನರಿಂದ ಹಣ ಲೂಟಿ: ಆರ್.ಅಶೋಕ್
ಬೆಂಗಳೂರು: ಬೆಂಗಳೂರಿನಲ್ಲಿ ಕಸದ ‘ಸೆಸ್’ ಹೆಸರಿನಲ್ಲಿ ಕಾಂಗ್ರೆಸ್ ಸರಕಾರ ಜನರಿಂದ ಹಣ ಲೂಟಿಗೆ ಮುಂದಾಗಿದೆ. ಈ ಸರಕಾರ ಬೆಂಗಳೂರನ್ನು ದುಬಾರಿ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ಬಳಿ ಹಣವಿಲ್ಲ. ಈ ಹಿಂದೆ ತುಘಲಕ್ ಕೂಡ ಹಾಕದಷ್ಟು ತೆರಿಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಮೇಲೆ ಹಾಕಿದ್ದಾರೆ. ಕಸ ವಿಲೇವಾರಿ ಮಾಡಲು ತೆರಿಗೆ ಹಾಕಲಾಗಿದೆ. 30x40 ಅಡಿ ವಿಸ್ತೀರ್ಣದ ಮನೆಗೆ 120ರೂ. ಇದ್ದ ಕಸದ ತೆರಿಗೆಯನ್ನು 720ರೂ.ಮಾಡಿದ್ದಾರೆ. ಅಂದರೆ ಶೇ.500ರಷ್ಟು ಹೆಚ್ಚಾಗಿದೆ. ಅಪಾರ್ಟ್‍ಮೆಂಟ್ ನಿವಾಸಿಗಳು ಕಸವನ್ನು ಅವರೇ ವಿಲೇವಾರಿ ಮಾಡಿಕೊಳ್ಳುತ್ತಿದ್ದು, ಅವರಿಗೆ ಕಸದ ಸೆಸ್ 1,800 ರೂ. ನಿಂದ 18 ಸಾವಿರ ರೂ.ಗೆ ಹೆಚ್ಚಿಸಲಾಗಿದೆ ಎಂದು ದೂರಿದರು.
ಮಾಲ್‍ಗಳಲ್ಲಿ 3,600ರೂ. ಇದ್ದ ಕಸದ ಸೆಸ್ 52,500ರೂ. ಆಗಿದ್ದು, ಶೇ.14.483ರಷ್ಟು ಹೆಚ್ಚಿದೆ. ಆಸ್ಪತ್ರೆಗಳಲ್ಲಿ ಕಸದ ಸೆಸ್ 9,600 ರೂ. ನಿಂದ 2,75,000 ರೂ. ಆಗಿದೆ. 50x80 ವಿಸ್ತೀರ್ಣದ ಖಾಲಿ ನಿವೇಶನಗಳಿಗೆ 600 ರೂ. ನಿಂದ 5,400 ರೂ. ಆಗಿದೆ. ಕಸವೇ ಉತ್ಪತ್ತಿ ಆಗದ ಜಾಗದಲ್ಲಿ ಬಿಬಿಎಂಪಿಯಿಂದ ದುಡ್ಡು ಉತ್ಪತ್ತಿ ಮಾಡಲಾಗುತ್ತಿದೆ ಎಂದರು.
ಜಮೀನುಗಳಿಗೆ ಬಳಕೆದಾರರ ಶುಲ್ಕ 3,600 ರೂ. ನಿಂದ 67,000 ರೂ. ಆಗಿ ಶೇ.1,761ರಷ್ಟು ಹೆಚ್ಚಾಗಿದೆ. 110 ಹಳ್ಳಿಗಳಲ್ಲಿ ಲಕ್ಷಾಂತರ ಜಮೀನುಗಳಿವೆ. ಅವುಗಳ ಮಾಲೀಕರು ಲಕ್ಷಾಂತರ ರೂಪಾಯಿ ಕಸದ ಸೆಸ್ ಪಾವತಿಸಬೇಕಿದೆ. ಬಳಕೆದಾರರ ಶುಲ್ಕವನ್ನು ನಾವು ಪಾವತಿಸುವುದಿಲ್ಲ ಎಂದು ಬೆಂಗಳೂರಿನ 2,800 ಜನರು ಆನ್‍ಲೈನ್ ಆಂದೋಲನ ಆರಂಭಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಿಬಿಎಂಪಿಯ ಮೂಲಕ ಜನರನ್ನು ಲೂಟಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಕಳೆದೆರಡು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಜನರು ಅತಿ ಹೆಚ್ಚು ತೆರಿಗೆ ಪಾವತಿಸುತ್ತಿದ್ದರೂ, ಅಭಿವೃದ್ಧಿಗೆ ಹಣ ನೀಡದೆ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದರು.
ಕೋವಿಡ್ ನಿಯಂತ್ರಣಕ್ಕೆ ಕ್ರಮ ವಹಿಸಿ: ರಾಜ್ಯದಲ್ಲಿ ಕೋವಿಡ್ ಮತ್ತೆ ಹರಡುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಅಲೆಸುತ್ತಾರೆ. ಆದುದರಿಂದ ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್ ಆರಂಭಿಸಿ, ಔಷಧಿ ಪೂರೈಸಬೇಕು. ಯಾವುದೇ ಖರ್ಚನ್ನು ರೋಗಿಗಳಿಂದ ಭರಿಸಬಾರದು. ಸರಕಾರವೇ ಪೂರ್ತಿ ವೆಚ್ಚ ಭರಿಸಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು.