ರಾಜ್ಯ ಸರಕಾರದ ಮೇಲೆ ಯಾರಿಗೂ ನಂಬಿಕೆ ಇಲ್ಲ : ಆರ್.ಅಶೋಕ್
ಆರ್.ಅಶೋಕ್
ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂ ಪ್ರೇರಣೆಯ ಪ್ರಕರಣ ದಾಖಲಿಸಿಕೊಂಡಿದೆ ಎಂದರೆ, ರಾಜ್ಯ ಸರಕಾರದ ಮೇಲೆ ಯಾರಿಗೂ ನಂಬಿಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರಕಾರ ತಪ್ಪು ಮಾಡಿಲ್ಲದಿದ್ದರೆ ಸರಿಯಾಗಿ ತನಿಖೆ ನಡೆಸಬೇಕಿತ್ತು. ಈಗ ಹೈಕೋರ್ಟ್ ಸ್ವಯಂ ಪ್ರೇರಣೆಯ ಪ್ರಕರಣ ದಾಖಲಿಸಿಕೊಂಡಿದೆ. ಇದಕ್ಕೆ ಸರಕಾರ ಅವಕಾಶ ಮಾಡಿಕೊಟ್ಟಿದೆ ಎಂದರೆ, ನ್ಯಾಯಾಲಯ ಸರಕಾರವನ್ನು ನಂಬುತ್ತಿಲ್ಲ ಎಂದರ್ಥ ಎಂದರು.
ಕಾಲ್ತುಳಿತ ದುರಂತದಲ್ಲಿ ಮೃತಪಟ್ಟಿರುವ 11 ಜನರ ಕುಟುಂಬದವರನ್ನೇ ಕೇಳಿ ತನಿಖೆಗೆ ನೀಡಬಹುದಿತ್ತು. ಮೊದಲು ಜಿಲ್ಲಾಧಿಕಾರಿ, ಆ ನಂತರ ನಿವೃತ್ತ ನ್ಯಾಯಾಧೀಶರು, ಆ ಬಳಿಕ ಎಸ್‍ಐಟಿ ತನಿಖೆ ಎಂದು ಹೇಳಿದ್ದಾರೆ. ಯಾವುದರಲ್ಲೂ ಖಚಿತತೆ ಇಲ್ಲ ಎಂದು ಅಶೋಕ್ ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಟುಂಬದವರು ಕ್ರಿಕೆಟಿಗರ ಜೊತೆಗೆ ಫೊಟೋ ಶೂಟ್ ಮಾಡಿಕೊಂಡಿದ್ದರಿಂದಲೇ 11 ಜನರು ಮೃತರಾಗಿದ್ದಾರೆ. ಬಿಜೆಪಿ ಎಲ್ಲ ಬಗೆಯ ಹೋರಾಟಗಳನ್ನು ಮಾಡಿದೆ. ಇನ್ನು ಮುಂದೆಯೂ ಹೋರಾಟ ಮಾಡಲಾಗುವುದು. ಸರಕಾರವೇ ಜನರನ್ನು ವಿಧಾನಸೌಧಕ್ಕೆ ಆಹ್ವಾನಿಸಿದೆ. ಹಾಗೆ ಆಹ್ವಾನ ನೀಡದೇ ಹೋಗಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ನಾವು ಪ್ರತಿಭಟನೆ ಮಾಡಿದಾಗ ನೂರಾರು ಪೊಲೀಸರು ಬಂದಿದ್ದರು. ಅದೇ ರೀತಿ ಎರಡು ಲಕ್ಷ ಜನರನ್ನು ನಿಯಂತ್ರಣ ಮಾಡಲು ಹೆಚ್ಚು ಪೊಲೀಸರನ್ನು ನಿಯೋಜಿಸಬೇಕಿತ್ತು. ಈ ದುರಂತದ ಬಗ್ಗೆಯೇ ಚರ್ಚೆ ನಡೆಸಲು ಮೂರು ದಿನದ ವಿಶೇಷ ಅಧಿವೇಶನ ಕರೆಯಲು ಸರಕಾರವನ್ನು ಆಗ್ರಹಿಸಿದ್ದೇನೆ ಎಂದು ಅಶೋಕ್ ಹೇಳಿದರು.
ಅಕ್ಟೋಬರ್ ತಿಂಗಳಲ್ಲಿ ಈ ಸರಕಾರದ ಕಥೆ ಮುಗಿಯಲಿದೆ: ಅಕ್ಟೋಬರ್ ತಿಂಗಳಲ್ಲೇ ಈ ಸರಕಾರದ ಕಥೆ ಮುಗಿಯಲಿದೆ. ಎಲ್ಲ ಶಾಸಕರು ನಾವೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನು 2028ಕ್ಕೆ ಇವರು ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ? ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹಳ ಚಿಂತೆಯಲ್ಲಿದ್ದಾರೆ ಎಂದು ಅಶೋಕ್ ವ್ಯಂಗ್ಯವಾಡಿದರು.