ಪರಿಶಿಷ್ಟರ ಒಳಮೀಸಲಾತಿ: ನ್ಯಾ.ನಾಗಮೋಹನ್ ದಾಸ್ ಆಯೋಗದ 6 ಶಿಫಾರಸು ಬಹಿರಂಗ
ನ್ಯಾ.ಎಚ್.ಎನ್.ನಾಗಮೋಹನ್ ದಾಸ್
ಬೆಂಗಳೂರು, ಆ.7: ಪರಿಶಿಷ್ಟ ಜಾತಿಗಳಲ್ಲಿನ ವಿವಿಧ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದ ಅಂತಿಮ ವರದಿಯಲ್ಲಿನ 6 ಶಿಫಾರಸುಗಳು ಬಹಿರಂಗಗೊಂಡಿವೆ.
ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳನ್ನು ಲಭ್ಯವಿರುವ ಶೇ.17ರಷ್ಟು ಮೀಸಲಾತಿಯನ್ನು ಪ್ರವರ್ಗ ಎ, ಬಿ, ಸಿ, ಡಿ, ಇ ಎಂದು ವಗೀಕರಿಸಿ ಮೀಸಲಾತಿ ಪ್ರಮಾಣ ಹಂಚಿಕೆ ಮಾಡಿ ಮೊದಲ ಶಿಫಾರಸು ಮಾಡಲಾಗಿದೆ. 2024ರ ಅಕ್ಟೋಬರ್‌ರಿಂದ ಪುನಃ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗುವ ದಿನಾಂಕದ ವರೆಗೆ ವಯೋಮಿತಿ ಮೀರಿದಂತಹ ಅಭ್ಯರ್ಥಿಗಳಿಗೆ ವಯೋಮಿತಿ ರಿಯಾಯಿತಿಯನ್ನು ನೀಡಿ, ಅವಕಾಶ ಕಲ್ಪಿಸಬೇಕು. ಈ ಸಂಬಂಧ ರಾಜ್ಯ ಸರಕಾರ ಆದೇಶ ಹೊರಡಿಸಬೇಕು ಎಂದು ಎರಡನೇ ಶಿಫಾರಸು ಮಾಡಲಾಗಿದೆ.
ಮೂರನೆಯದಾಗಿ ಒಂದು ಪ್ರವರ್ಗದಲ್ಲಿ ಭರ್ತಿಯಾಗದೆ ಉಳಿದಿರುವ ಹುದ್ದೆಗಳನ್ನು ‘ಕ್ಯಾರಿ ಫಾರ್ವಡ್’ ನಿಯಮದಂತೆ ಭರ್ತಿ ಮಾಡಬೇಕು. ಅಲ್ಲಿಗೂ ಸೂಕ್ತ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಾಗ ಅಂತಹ ಹುದ್ದೆಗಳನ್ನು ಪರಿಶಿಷ್ಟ ಜಾತಿಯ ಮತ್ತೊಂದು ಪ್ರವರ್ಗಕ್ಕೆ ವರ್ಗಾವಣೆ ಮಾಡಬೇಕು. ಈ ಸಂಬಂಧ ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿಗಳನ್ನು ಮಾಡಬೇಕು ಎಂದು ಆಯೋಗ ಉಲ್ಲೇಖಿಸಿದೆ.
ಕೆಲವು ಜಾತಿಗಳ ಹೆಸರು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದು, ಇದನ್ನು ಮನಗಂಡು ತಮ್ಮ ಜಾತಿಯ ಹೆಸರನ್ನು ಮಾರ್ಪಾಡು ಮಾಡಿಕೊಳ್ಳಲು ಅಪೇಕ್ಷಿಸಿದರೆ ಸರಕಾರ ಅವಕಾಶ ನೀಡಬೇಕು ಎಂದು ನಾಲ್ಕನೇ ಶಿಫಾರಸು ಮಾಡಿದೆ.
ಅದೇ ರೀತಿ, ಪರಿಶಿಷ್ಟ ಜಾತಿಯ ಪೈಕಿ ಕೆಲವರು ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ‘ಜಾತಿ ಪ್ರಮಾಣ’ ಪಡೆದುಕೊಂಡು ಮೀಸಲಾತಿಯನ್ನು ಅನುಭವಿಸಿಕೊಂಡು ಬರುತ್ತಿದ್ದಾರೆ. ಕೆಲವರಿಗೆ ತಮ್ಮ ಮೂಲ ಜಾತಿ ಯಾವುದೆಂದು ತಿಳಿದಿದೆ. ಉದಾಹರಣೆಗೆ ಮನ್ಸ, ಕೆಂಬಟ್ಟಿ, ಮೇರ, ಮಾದಿಗ ದಾಸರಿ ಇತ್ಯಾದಿಯಾಗಿ. ಆದರೆ, ಇವರ ಮೂಲ ಹೆಸರು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಇದರ ಬಗ್ಗೆ ಅಧ್ಯಯನ ನಡೆಸಿ ಈ ಜಾತಿಗಳ ಹೆಸರುಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಲು ಸರಕಾರ ಕ್ರಮ ವಹಿಸಬೇಕು ಎಂದು ಆಯೋಗ ಐದನೇ ಶಿಫಾರಸಿನಲ್ಲಿ ತಿಳಿಸಿದೆ.
ಮೂಲ ಜಾತಿಯ ಹೆಸರನ್ನು ಒಳಗೊಂಡಿರುವ ಜಾತಿ ಪ್ರಮಾಣ ಪತ್ರ ನೀಡಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅಂತಿಮ ವರದಿಯಲ್ಲಿ ಆರನೇ ಶಿಫಾರಸು ಉಲ್ಲೇಖಿಸಲಾಗಿದೆ.
ಆಯೋಗವು ನಡೆಸಿದ ಸಮೀಕ್ಷೆಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಒಟ್ಟು 1,07,01,982 ಜನರಿದ್ದಾರೆ. ಬುಡ್ಗ ಜಂಗಮ-ಬೇಡ ಜಂಗಮ ಜನಸಂಖ್ಯೆ 1,77,662 ಮತ್ತು ಅಂತರ್ಜಾತಿ ವಿವಾಹವಾದವರು ಪರಿಶಿಷ್ಟ ಜಾತಿಯವರಲ್ಲ ಎಂದು ಕಂಡುಬಂದಿರುವ ಸಂಖ್ಯೆ 14,449ರಷ್ಟಿದೆ.