ಚಿತ್ರೋತ್ಸವಕ್ಕೆ ಎಲ್ಲರೂ ಬರಲಿ ಅನ್ನುವುದಷ್ಟೇ ಡಿ.ಕೆ.ಶಿವಕುಮಾರ್ ಉದ್ದೇಶ : ಸಾಧು ಕೋಕಿಲ
ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಚಲನ ಚಿತ್ರೋತ್ಸವಕ್ಕೆ ಎಲ್ಲರೂ ಬರಲಿ ಅನ್ನುವುದಷ್ಟೇ ಅವರ ಉದ್ದೇಶವಾಗಿತ್ತು ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಡಿ.ಕೆ.ಶಿವಕುಮಾರ್ ಅವರ ‘ನಟ್ಟು, ಬೋಲ್ಟು, ಟೈಟ್’ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಹೇಳಿರುವುದರಲ್ಲಿ ತಪ್ಪೇನಿಲ್ಲ. ಸಿಎಂ, ಡಿಸಿಎಂ ಸಿನಿಮಾದವರನ್ನು ತಮ್ಮ ಮನೆಯವರು ಅಂದುಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ದೂರದವರಲ್ಲ, ತುಂಬಾ ಹತ್ತಿರದವರು ಎಂದರು.
ಸಿನಿಮಾದವರು ಸಿಎಂ, ಡಿಸಿಎಂ ಅವರಿಗೆ ಆತ್ಮೀಯರು. ಅವರು ಹೇಳಿರುವುದು ದೊಡ್ಡ ವಿಷಯ ಆಗುವುದಿಲ್ಲ, ಆದರೆ, ದೊಡ್ಡ ವಿಷಯ ಮಾಡುತ್ತಿದ್ದಾರೆ ಅಷ್ಟೇ. ಡಿಸಿಎಂ ಅವರು ಹೇಳಿರುವುದರಲ್ಲಿ ಹಾಗೂ ಕೇಳಿರುವುದರಲ್ಲಿ ತಪ್ಪಿಲ್ಲ. ನೀರಿನ ವಿಚಾರದಲ್ಲಿ ಎಲ್ಲರೂ ಬರಬೇಕಿತ್ತು ಅನ್ನುವುದು ಅವರ ಉದ್ದೇಶ, ಚಲನಚಿತ್ರೋತ್ಸವಕ್ಕೂ ಕೂಡ ಎಲ್ಲರೂ ಬರಲಿ ಅನ್ನುವುದಷ್ಟೇ ಅವರ ಉದ್ದೇಶವಾಗಿತ್ತು ಎಂದು ಸಾಧು ಕೋಕಿಲ ಹೇಳಿದರು.
ಬೆಂಗಳೂರು ಚಲನಚಿತ್ರೋತ್ಸವಕ್ಕೆ ಕಲಾವಿದರಿಗೆ ಕೊನೆ ಕ್ಷಣದಲ್ಲಿ ಆಹ್ವಾನ ನೀಡಿದ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಾಧುಕೋಕಿಲ, ಕಲಾವಿದರಿಗೆ ಕೊನೆಯ ಕ್ಷಣದಲ್ಲಿ ಆಮಂತ್ರಣ ಹೋಗಿಲ್ಲ. ಚಲನಚಿತ್ರೋತ್ಸವ ಜ.6ಕ್ಕೆ ನಿರ್ಧಾರವಾಗಿದೆ. ಕೆಲವರಿಗೆ ಆಹ್ವಾನದ ಬಗ್ಗೆ ಬಗ್ಗೆ ಕೇಳಲು ಆಗುತ್ತದೆ. ಉದ್ಘಾಟನೆ ಬಗ್ಗೆ ಗೊತ್ತಾಗುವುದಿಲ್ಲವಾ?, ಬೇರೆಯವರ ಮೇಲೆ ಗೂಬೆ ಕೂರಿಸುವುದಲ್ಲ. ಆಹ್ವಾನ ಪತ್ರಿಕೆ ಎಲ್ಲೆಲ್ಲಿ ಹೋಗಿದೆ ಎನ್ನುವ ಪಟ್ಟಿ ತೆಗೆದರೆ ಎಲ್ಲ ಗೊತ್ತಾಗುತ್ತದೆ ಎಂದರು.