ಹೊಸ ಎಸ್‍ಟಿಪಿಗಳನ್ನು ನಿರ್ಮಿಸುವ ಪ್ರಸ್ತಾವನೆಗಳಿಗೆ ಅನುಮೋದನೆ : ಮುಖ್ಯಮಂತ್ರಿ ಸೂಚನೆ
ಬೆಂಗಳೂರು : ಪ್ರಸಕ್ತ 1300 ಎಂಎಲ್‍ಡಿ ನೀರನ್ನು ಬೆಂಗಳೂರು ನಗರದಲ್ಲಿ ಸಂಸ್ಕರಿಸಲಾಗುತ್ತಿದೆ. ಹೊಸದಾಗಿ 583 ಎಂಎಲ್‍ಡಿ ನೀರು ಸಂಸ್ಕರಿಸಲು ಪೂರಕವಾಗಿ ಹೊಸ ಎಸ್‍ಟಿಪಿಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಣ್ಣ ನೀರಾವರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ, ವೃಷಭಾವತಿ, ಹೊಸಕೋಟೆ, ಆನೇಕಲ್ ಯೋಜನೆಗಳಡಿ ಸಣ್ಣ ನೀರಾವರಿ ಇಲಾಖೆ ಕೆರೆಗಳನ್ನು ತುಂಬಿಸಲು ಅಗತ್ಯವಿರುವ ಸಂಪೂರ್ಣ ಪ್ರಮಾಣದ ನೀರನ್ನು ಒದಗಿಸಲು ಬಿಡಬ್ಲುಎಸ್‍ಎಸ್‍ಬಿ ಕ್ರಮ ಕೈಗೊಳ್ಳಬೇಕು. ಇದಕ್ಕೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ 8.92 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದೆ. ಇದರಲ್ಲಿ 421 ಏತ ನೀರಾವರಿ ಯೋಜನೆಗಳ 94315 ಹೆಕ್ಟೇರ್, 3778 ಕೆರೆಗಳ 437086 ಹೆಕ್ಟೇರ್ ಅಚ್ಚುಕಟ್ಟು ಸೇರಿದೆ. ಪ್ರಸಕ್ತ ವರ್ಷ ಇಲಾಖೆಗೆ 1577 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಇದುವರೆಗೆ 1468.17 ಕೋಟಿ ರೂ.ವೆಚ್ಚ ಮಾಡಲಾಗಿದೆ. ಪ್ರಸಕ್ತ ವರ್ಷ 9449 ಹೆಕ್ಟೇರ್ ಹೊಸ ಅಚ್ಚುಕಟ್ಟು ಸೃಷ್ಟಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಪ್ರಸಕ್ತ ಹಣಕಾಸು ಸಾಲಿನಲ್ಲಿ ಒಟ್ಟು 1,112.59 ಕೋಟಿ ರೂ.ವೆಚ್ಚದಲ್ಲಿ 17 ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಕಾಮಗಾರಿಯನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು. ಇದರಿಂದಾಗಿ 59,89.64 ಹೆಕ್ಟೇರ್ ಅಚ್ಚುಕಟ್ಟು ಸೃಜನೆಯಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೆ.ಸಿ.ವ್ಯಾಲಿ 1 ನೇ ಹಂತದಲ್ಲಿ 1342 ಕೋಟಿ ರೂ.ವೆಚ್ಚದಲ್ಲಿ 145 ಕೆರೆಗಳನ್ನು ತುಂಬಿಸುವ ಯೋಜನೆ ಪೂರ್ಣಗೊಳಿಸಲಾಗಿದೆ. ಯೋಜನೆಯಡಿ ಬಿಡಬ್ಲುಎಸ್‍ಎಸ್‍ಬಿ 440 ಎಂಎಲ್‍ಡಿ ಸಂಸ್ಕರಿಸಿದ ನೀರನ್ನು ಒದಗಿಸಬೇಕಾಗಿದ್ದು, ಪ್ರಸಕ್ತ 265 ಎಂಎಲ್‍ಡಿ ಒದಗಿಸುತ್ತಿದೆ. ಪೂರ್ಣ ಪ್ರಮಾಣದ ನೀರು ಪೂರೈಕೆಗೆ ಅಗತ್ಯವಿರುವ ಸಂಸ್ಕರಣಾ ಘಟಕಗಳ ನಿರ್ಮಾಣ ಕಾರ್ಯವನ್ನು ಈ ವರ್ಷದ ಅಂತ್ಯದ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.
ಕೆ.ಸಿ.ವ್ಯಾಲಿ 2ನೇ ಹಂತದಲ್ಲಿ 446 ಕೋಟಿ ರೂ. ವೆಚ್ಚದಲ್ಲಿ 272 ಕೆರೆಗಳನ್ನು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇದುವರೆಗೆ 32 ಕೆರೆಗಳನ್ನು ತುಂಬಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.