×
Ad

'ಅನ್ನರಾಮಯ್ಯ' ಎಂದು ಹೊಗಳಿಸಿಕೊಳ್ಳುವ ಸಿದ್ದರಾಮಯ್ಯನವರೇ, ಅನ್ನಭಾಗ್ಯಕ್ಕೆ ಏಕೆ ಭಂಗ ತಂದಿದ್ದೀರಿ?: ವಿಜಯೇಂದ್ರ

Update: 2025-07-08 13:21 IST

ಬೆಂಗಳೂರು: 'ಅನ್ನರಾಮಯ್ಯ' ಎಂದು ಹೊಗಳಿಸಿ ಕೊಳ್ಳುವ ಸಿದ್ದರಾಮಯ್ಯನವರೇ, ಅನ್ನಭಾಗ್ಯಕ್ಕೆ ಏಕೆ ಭಂಗ ತಂದಿದ್ದೀರಿ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಸಿದ್ದಾರೆ.

ಅನ್ನಭಾಗ್ಯ ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಯೋಜನೆಗಳ ಆಹಾರ ಧಾನ್ಯ ಸಾಗಾಟ ವೆಚ್ಚದ ಬಿಲ್ ಐದು ತಿಂಗಳಿನಿಂದ ಬಾಕಿ ಇರುವುದನ್ನು ಖಂಡಿಸಿ, ರಾಜ್ಯ ಪಡಿತರ ಆಹಾರ ಧಾನ್ಯಗಳ ಸಗಟು ಹಾಗೂ ಚಿಲ್ಲರೆ ಸಾಗಾಟ ಗುತ್ತಿಗೆದಾರರ ಸಂಘವು ಸೋಮವಾರದಿಂದ ಆಹಾರಧಾನ್ಯ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, "ಸರಕಾರದ ಖಜಾನೆ ಬರಿದಾಗಿಲ್ಲ ಎಂಬ ಸ್ಪಷ್ಟನೆಯ ನಿಮ್ಮ ಹೇಳಿಕೆಗಳು ಸುಳ್ಳು ಹಾಗೂ ಭಂಡತನದ ಪರಮಾವಧಿ ಎನ್ನುವುದನ್ನು ಅನ್ನಭಾಗ್ಯ ಯೋಜನೆಯ ಸಾರಥಿಗಳಾಗಿ ಕೆಲಸ ಮಾಡುತ್ತಿದ್ದ ಲಾರಿ ಮಾಲಕರಿಗೆ ತಿಂಗಳುಗಟ್ಟಲೆ ಬಾಡಿಗೆ ಪಾವತಿಸದೇ (4,500 ಲಾರಿಗಳು) ಅವರ ಬದುಕಿನ ಭಾಗ್ಯಕ್ಕೆ ಬರೆ ಎಳೆದಿದ್ದೀರಿ. ಇದರ ಪರಿಣಾಮ ಇಂದಿನಿಂದ ಅನ್ನ ಭಾಗ್ಯವನ್ನು ಅವಲಂಬಿಸಿದ್ದ ಲಕ್ಷಾಂತರ ಬಡ ಕುಟುಂಬಗಳಿಗೆ ‘ಖಾಲಿ ತಟ್ಟೆಯಲ್ಲಿ ಕೈ ತೊಳೆಯುವ ಭಾಗ್ಯ ‘ಕರುಣಿಸುತ್ತಿದ್ದೀರಿ" ಎಂದು ಟೀಕಿಸಿದ್ದಾರೆ.

"ನಿಮ್ಮ ಸರಕಾರ ಅನ್ನ ಭಾಗ್ಯದ ಆಹಾರ ಧಾನ್ಯಗಳನ್ನು ಸಾಗಿಸುವ ಲಾರಿಗಳಿಗೆ ಬಾಡಿಗೆ ಕೊಡುವ ಸ್ಥಿತಿಯಲ್ಲೂ ಇಲ್ಲದ ಕೆಟ್ಟ ಪರಿಸ್ಥಿತಿಗೆ ತಲುಪಿದೆ ಎಂದರೆ ಸರಕಾರದ ಆರ್ಥಿಕ ಸ್ಥಿತಿ ದಿವಾಳಿಯತ್ತ ಸಾಗಿರುವುದರ ಸೂಚನೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದೆ ಎಂದವರು ಆರೋಪಿಸಿದ್ದಾರೆ.

"ಅನ್ನಭಾಗ್ಯದ ಯೋಜನೆಯಡಿಯಲ್ಲಿ ರಾಜ್ಯ ಸರಕಾರವೊಂದೇ ಸಾಗಣೆ ವೆಚ್ಚ ಭರಿಸಬೇಕಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ನೀಡುತ್ತಿರುವ ಉಚಿತ 5 ಕೆ.ಜಿ. ಅಕ್ಕಿಯ ಜೊತೆಗೆ ಆಹಾರ ಧಾನ್ಯ ಸಾಗಾಟ ವೆಚ್ಚವನ್ನೂ ಭರಿಸುತ್ತಿದೆ. ಆದರೂ ಲಾರಿ ಮಾಲಕರಿಗೆ ಬಾಡಿಗೆ ಕೊಡದೆ ಏಕಿಷ್ಟು ಸತಾಯಿಸುತ್ತಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ.

"ನಿಮ್ಮ ಸರಕಾರದ ಭ್ರಷ್ಟ ವ್ಯವಹಾರಗಳಿಗೆ ಆದಾಯ ಮೂಲಗಳನ್ನು ಕಂಡುಹಿಡಿದುಕೊಳ್ಳಲು ಬೆಲೆ ಏರಿಕೆ, ಅವೈಜ್ಞಾನಿಕ ತೆರಿಗೆಗಳನ್ನು ಜನರ ಮೇಲೆ ಹೇರುತ್ತಲೇ ಇದ್ದೀರಿ, ನಿಮ್ಮ ಕಮಿಷನ್ ದಂಧೆಗೆ ಕನಿಷ್ಠ ಅಲ್ಪವಿರಾಮನ್ನಾದರೂ ನೀಡಿ ಜನರನ್ನು ಹಸಿವೆಂಬ ಬಾಧೆ ಬಾಧಿಸದಂತೆ ಈ ಕೂಡಲೇ ಲಾರಿ ಮಾಲಕರ ಬಾಕಿ ಹಣವನ್ನು ಪಾವತಿಸಿ. ಹಸಿದವರ ಆಕ್ರೋಶ ಹಾಗೂ ಲಾರಿಯನ್ನು ನಂಬಿ ಜೀವನ ಮಾಡುತ್ತಿರುವ ಲಾರಿ ಮಾಲಕರು ಹಾಗೂ ಚಾಲಕರ ಕುಟುಂಬಗಳ ಶಾಪಕ್ಕೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಿ" ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News