ಬೆಂಗಳೂರು| ಇಬ್ಬರು ಹೆಣ್ಣು ಮಕ್ಕಳ ಹತ್ಯೆಗೈದ ಪ್ರಕರಣ: ಮಲತಂದೆಯ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು: ಇಬ್ಬರು ಹೆಣ್ಣು ಮಕ್ಕಳನ್ನು ಹತ್ಯೆಗೈದ ಪ್ರಕರಣದಡಿ ಆರೋಪಿ ಮಲತಂದೆಯನ್ನು ಇಲ್ಲಿನ ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಸುಮಿತ್ ಎಂಬಾತ ಬಂಧಿತ ಮಲತಂದೆ ಎಂದು ಗುರುತಿಸಲಾಗಿದ್ದು, ಹತ್ಯೆಗೈದ ಬಳಿಕ ಪರಾರಿಯಾಗಲು ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಆರೋಪಿಯನ್ನು ಬಂಧಿಸಿ ಕ್ರಮ ಜರುಗಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಆ.24ರಂದು ಅಮೃತಹಳ್ಳಿ ಠಾಣೆ ವ್ಯಾಪ್ತಿಯ ಕಾವೇರಿ ಲೇಔಟ್‍ನಲ್ಲಿ ಬಾಲಕಿಯರನ್ನು ಕತ್ತು ಸೀಳಿ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಬಳಿಕ ಪ್ರಕರಣ ದಾಖಲಾಗುತ್ತಿದ್ದಂತೆ ಆ.25ರಂದು ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಬೆಂಗಳೂರಿನಿಂದ ಪರಾರಿಯಾಗಲು ಆರೋಪಿ ಆ.25ರ ರವಿವಾರ ರಾತ್ರಿ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ಟ್ರೈನ್ ಟಿಕೆಟ್ ಖರೀದಿಗಾಗಿ ತನ್ನ ಮೊಬೈಲ್ ಆನ್ ಮಾಡಿದ್ದ. ಆರೋಪಿಯ ಜಾಡು ಹಿಡಿದು ಹೊರಟಿದ್ದ ಪೊಲೀಸರು ತಕ್ಷಣವೇ ಆತನ ಮೊಬೈಲ್ ಟ್ರೇಸ್ ಮಾಡಿ ಬಂಧಿಸಿರುವುದಾಗಿ ಈಶಾನ್ಯ ವಿಭಾಗದ ಡಿಸಿಪಿ ಸಜೀತ್ ವಿವರಿಸಿದ್ದಾರೆ.