×
Ad

ಮೈಕ್ರೋ ಫೈನಾನ್ಸ್ ವಸೂಲಿ ಏಜೆಂಟರ ಕಿರುಕುಳ ಆರೋಪ : ವ್ಯಕ್ತಿ ಆತ್ಮಹತ್ಯೆ

Update: 2025-02-03 13:13 IST

ಮೈಸೂರು : ಮೈಕ್ರೋ ಫೈನಾನ್ಸ್‌ನಿಂದ ಸಾಲ ತೆಗೆದುಕೊಂಡು ಸ್ನೇಹಿತನಿಗೆ ನೀಡಿದ್ದ ವ್ಯಕ್ತಿಗೆ ಸ್ನೇಹಿತ ಮಾಡಿದ ಮೋಸ ಹಾಗೂ ಸಾಲ ಮರುಪಾವತಿಸುವಂತೆ ವಸೂಲಿ ಏಜೆಂಟರು ನೀಡಿದ ಕಿರುಕುಳದಿಂದ ಸೆಲ್ಸಿ ವೀಡಿಯೊ ಮಾಡಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ತಾಲೂಕಿನ ದಂಡಿಕೆರೆ ಗ್ರಾಮದ ಬಳಿ ನಡೆದಿರುವುದು ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ನಂಜನಗೂಡು ತಾಲೂಕು ಬಿಳಿಗೆರೆ ಹೋಬಳಿಯ ಮಲ್ಲೂಪುರ ಗ್ರಾಮದ ನಿವಾಸಿ ರಾಜಪ್ಪ ಎಂಬವರ ಪುತ್ರ ಸಿದ್ದೇಶ್ (35)ಎಂದು ಗುರುತಿಸಲಾಗಿದೆ.

ಮೃತ ಸಿದ್ದೇಶ್ ಅವರು ಪತ್ನಿ ರೂಪ ಹಾಗೂ ಮಕ್ಕಳಾದ ಸಮಂತ್(11), ಸಮೃದ್ಧ(3) ಅವರನ್ನು ಅಗಲಿದ್ದಾರೆ.

ಸಿದ್ದೇಶ್‌ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 7 ನಿಮಿಷಗಳ ವೀಡಿಯೊ ಹೇಳಿಕೆ ದಾಖಲಿಸಿ, ತನ್ನ ಸಾವಿಗೆ ಸ್ನೇಹಿತ ಉತ್ತನಹಳ್ಳಿ ಮಣಿಕಂಠ ಹಾಗೂ ಐಸಿಐಸಿ ಬ್ಯಾಂಕ್‌ನವರು ಕಾರಣ ಎಂದು ಆರೋಪಿಸಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ತನ್ನ ಕುಟುಂಬಕ್ಕೆ ನೆರವು ನೀಡುವಂತೆ ವೀಡಿಯೊದಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ನಂಜನಗೂಡಿನಲ್ಲಿ ಈ ಹಿಂದೆ ಟೀ ಅಂಗಡಿ ಇಟ್ಟುಕೊಂಡಿದ್ದ ಸಿದ್ದೇಶ್ ವ್ಯಾಪಾರ ನಷ್ಟವಾದ ಹಿನ್ನೆಲೆಯಲ್ಲಿ ಆಟೊ ರಿಕ್ಷಾವೊಂದನ್ನು ಖರೀದಿಸಿ ಬಾಡಿಗೆಗೆ ಓಡಿಸುತ್ತಿದ್ದರು. ಆದರೆ, ಸ್ನೇಹಿತನಿಗೆ ಸಾಲ ಕೊಡಿಸಿದ ಪರಿಣಾಮ ಇದೀಗ ಬ್ಯಾಂಕ್ ಏಜೆಂಟರು ನೀಡಿದ ಕಿರುಕುಳ ಹಾಗೂ ಸ್ನೇಹಿತ ಮಾಡಿದ ಮೋಸದಿಂದಾಗಿ ಮನೆಯಿಂದ 25 ಕಿ.ಮೀ. ದೂರದಲ್ಲಿ - ದಂಡಿಕೆರೆ ಗ್ರಾಮದ ಮಹದೇಶ್ವರ ದೇವಾಲಯದ ಸಮೀಪದ ರಸ್ತೆಯಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಸಿದ್ದೇಶ್ ಮೃತದೇಹ ಪತ್ತೆಯಾಗಿದೆ

ಈ ಸಂಬಂಧ ವರುಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News