ಬೆಂಗಳೂರಿನಲ್ಲಿ ಉಷ್ಣಾಂಶ ಇಳಿಕೆ, ಚಳಿ ಹೆಚ್ಚಳ: ಮಂಜು ಮುಸುಕಿದ ವಾತಾವರಣ
ಸಾಂದರ್ಭಿಕ ಚಿತ್ರ
ಬೆಂಗಳೂರು, ನ.16: ನಗರದಲ್ಲಿ ಮಳೆ ಕಡಿಮೆಯಾದ ಬೆನ್ನಲ್ಲಿಯೇ ಉಷ್ಣಾಂಶದಲ್ಲಿ ಕುಸಿತ ಕಂಡಿದೆ. ಇದರಿಂದಾಗಿ ಚಳಿಯ ವಾತಾವರಣ ಮುನ್ನೆಲೆಗೆ ಬಂದಿದೆ.
ಸಂಜೆ ಅವಧಿಯಲ್ಲಿ ಮೋಡ ಕವಿದ ವಾತಾವರಣ ಇದ್ದರೆ, ಬೆಳಗ್ಗೆ ಸಮಯದಲ್ಲಿ ಮಂಜು ಮುಸುಕುತ್ತಿದೆ. ಹೀಗಾಗಿ, ಕೆಲ ದಿನಗಳಿಂದ ನಗರದಲ್ಲಿ ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶ ತಗ್ಗಿದೆ. ಬೆಳಗ್ಗೆ ಹಾಗೂ ಸಂಜೆ ಅವಧಿಯಲ್ಲಿ ನಗರದ ವಿವಿಧೆಡೆ ಚಳಿಯ ವಾತಾವರಣ ಕಾಣಿಸಿಕೊಳ್ಳುತ್ತಿದೆ.
ಕಳೆದೊಂದು ವಾರದಿಂದ ಗರಿಷ್ಠ ಉಷ್ಣಾಂಶ ಸರಾಸರಿ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆ. ದಾಖಲಾಗುತ್ತಿದೆ. ಮೋಡ ಕವಿದ ವಾತಾವರಣ ಸಹಿತ ಆಗಾಗ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ತಾಪಮಾನ ಕುಸಿಯುತ್ತಿದೆ. ವಾರದಿಂದ ಹಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನದಲ್ಲೂ ಇಳಿಕೆಯಾಗಿದೆ. ರಾತ್ರಿಯಲ್ಲೂ ತಾಪಮಾನ ಮತ್ತಷ್ಟು ಕಡಿಮೆಯಾಗಿ, ಚಳಿ ಅನುಭವವಾಗುತ್ತಿದೆ.
ಹವಾಮಾನ ಇಲಾಖೆಯ ಪ್ರಕಾರ ನಗರದಲ್ಲಿ ಬುಧವಾರ ಗರಿಷ್ಠ ಉಷ್ಣಾಂಶ 24.7 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 19.4 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ. ಗುರುವಾರ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ.
ನಗರದಲ್ಲಿ ಮುಂದಿನ ಒಂದು ವಾರ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಆಸುಪಾಸು ಹಾಗೂ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಲಿದೆ ಎಂದು ಇಲಾಖೆ ತಿಳಿಸಿದೆ.