×
Ad

ಅಂಬೇಡ್ಕರ್‌ರನ್ನು ಸಮಕಾಲೀನಗೊಳಿಸುವುದು ಹೇಗೆ ಎನ್ನುವುದು ಮುಖ್ಯ ಪ್ರಶ್ನೆ : ಕೋಟಿಗಾನಹಳ್ಳಿ ರಾಮಯ್ಯ

Update: 2025-02-09 22:45 IST

ಬೆಂಗಳೂರು : ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಸಮಕಾಲೀನಗೊಳಿಸುವುದು ಹೇಗೆ ಎನ್ನುವುದು ಮುಖ್ಯವಾದ ಪ್ರಶ್ನೆ. ಅಂಬೇಡ್ಕರ್ ರನ್ನು ಮುಖಾಮುಖಿಯಾಗಬೇಕು ಎಂದು ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಬಸವನಗುಡಿಯಲ್ಲಿರುವ ಆಕೃತಿ ಪುಸ್ತಕ ಮಳಿಗೆಯಲ್ಲಿ ‘ಎ ಪಾರ್ಟ್ ಅಪಾರ್ಟ್’ ದಿ ಲೈಫ್ ಆಂಡ್ ಥಾಟ್ ಆಫ್ ಬಿ.ಆರ್.ಅಂಬೇಡ್ಕರ್ ಕೃತಿಯ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಇದುವರೆಗೂ ಅಂಬೇಡ್ಕರ್ ಅವರನ್ನು ಯಾವ ರೀತಿ ನೋಡುತ್ತಾ ಬಂದಿದ್ದೇವೆ. ಯಾವ ನೆಲೆಗಳು ಅಂಬೇಡ್ಕರ್ ಅವರನ್ನು ಮುಟ್ಟಿಲ್ಲವೋ, ಇಂದು ಆ ನೆಲೆಗಳು ಅವರನ್ನು ಮುಟ್ಟುತ್ತಿರುವುದರಿಂದ ಹೊಸ ರೀತಿಯ ಆಯಾಮ ಸಿಗಬಹುದು ಎಂದು ಹೇಳಿದರು.

ಅಂಬೇಡ್ಕರ್ ಅವರನ್ನು ಇನ್ನೂ ಹಲವು ಮುಖಗಳಲ್ಲಿ ನೋಡಬಹುದಿತ್ತು. ಚರಿತ್ರೆಗೂ ನಮಗೂ ಏನು ಸಂಬಂಧ ಎನ್ನುವುದು ಬಹಳ ಮುಖ್ಯ. ಅಂಬೇಡ್ಕರ್ ಬರಹವನ್ನು ಓದಿದರೆ, ಅವರು ಎಷ್ಟು ಆಳವಾಗಿ ಇತಿಹಾಸವನ್ನು ಓದಿದ್ದಾರೆ ಎನ್ನುವುದು ತಿಳಿಯುತ್ತದೆ. ನಮ್ಮ ಚರಿತ್ರೆ ಆರಂಭವಾಗುವುದೇ ಅಂಬೇಡ್ಕರ್ ಅವರಿಂದ. ಅದರಾಚೆಗೆ ನಮಗೆ ಚರಿತ್ರೆಯೇ ಇಲ್ಲ ಎಂದು ತಿಳಿಸಿದರು.

ಅಶೋಕ್ ಗೋಪಾಲ್ ಎ ಪಾರ್ಟ್ ಅಪಾರ್ಟ್ ಕೃತಿಯಲ್ಲಿ ಅಂಬೇಡ್ಕರ್ ಅವರ ಕುರಿತು ಮತ್ತು ಅವರ ಚಿಂತನೆಗಳನ್ನು ಬಹಳ ತಾತ್ವಿಕವಾಗಿ ಕಟ್ಟಿಕೊಟ್ಟಿದ್ದಾರೆ. ಬಾಬಾ ಸಾಹೇಬರ ಬಗ್ಗೆ ಅನೇಕರು ಕೆಲಸ ಮಾಡುತ್ತಾ ಬಂದಿದ್ದಾರೆ. ಇವತ್ತು ಹೊಸ ರೀತಿಯಾದ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಬಾಬಾ ಸಾಹೇಬರು ಬಿತ್ತಿದ ಬೀಜವಾದ ಭಾರತದ ಸಂವಿಧಾನದ ಮೂಲಕ, ರಾಜಕೀಯ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಪ್ರಭುತ್ವವನ್ನು ಸಾಧಿಸಬೇಕಿದೆ. ನಮ್ಮ ಪ್ರಜ್ಞೆ, ನಮ್ಮ ಅಸ್ಮಿತೆ ಸಹಜ ರೀತಿಯಲ್ಲಿ ಒಳಗೊಳ್ಳಬೇಕು. ಅದೇ ನಿಜವಾದ ಭಾರತೀಯತೆ ಎಂಬುದನ್ನು ಪುಸ್ತಕದಲ್ಲಿ ತಿಳಿಯಬಹುದು ಎಂದು ಹೇಳಿದರು.

ಅಂಬೇಡ್ಕರ್ ಅವರು ಬಹುರೂಪೀಕರಣಗೊಳಿಸುವುದೇ ನಿಜವಾದ ರಾಜಕೀಯ ಹೋರಾಟ. ಅಂಬೇಡ್ಕರ್ ಬರಿ ಚರಿತ್ರೆ ಮಾತ್ರವಲ್ಲ. ಅವರು ಪುರಾಣವೂ ಹೌದು, ಜನಪದವೂ, ಮಹಾಕಾವ್ಯವೂ ಹೌದು. ಸಮಕಾಲೀನಗೊಳಿಸಿಕೊಳ್ಳಬೇಕಾದ ಅಂಬೇಡ್ಕರ್ ಅವರನ್ನು ಮೂರ್ತಿಕರಣಗೊಳಿಸಲಾಗಿದೆ ಎಂದು ತಿಳಿಸಿದರು.

ಸಂವಾದದಲ್ಲಿ ಲೇಖಕ ಅಶೋಕ್ ಗೋಪಾಲ್, ಪ್ರಾಧ್ಯಾಪಕಿ ವಿಜಯಶಾಂತಿ ಮೂರ್ತಿ, ಚಿಂತಕ ವಿ.ಎಲ್.ನರಸಿಂಹಮೂರ್ತಿ, ಪ್ರಕಾಶಕ ಗುರುಪ್ರಸಾದ್ ಮತ್ತಿತ್ತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News