×
Ad

ಅಂತರಂಗ ರೂಪುಗೊಳ್ಳಲು ರಂಗ ಚಟುವಟಿಕೆಗಳು ಅಗತ್ಯ: ಪ್ರೊ.ಕೆ.ವೈ. ನಾರಾಯಣಸ್ವಾಮಿ

Update: 2025-05-20 23:51 IST

ಬೆಂಗಳೂರು: ಪ್ರಸ್ತುತ ಸಾಮಾಜಿಕ ಸುಧಾರಣೆಗೆ ಪೂರಕವಾದ ಪಠ್ಯಗಳ ಕೊರತೆ ಇದೆ. ಅಂತರಂಗವಿಲ್ಲದ ಮನುಷ್ಯರನ್ನು ಶಿಕ್ಷಣ ವ್ಯವಸ್ಥೆ ತಯಾರುಗೊಳಿಸುತ್ತಿದ್ದು, ಅಂತರಂಗ ರೂಪುಗೊಳ್ಳಲು ರಂಗ ಚಟುವಟಿಕೆಗಳು ಅಗತ್ಯ ಎಂದು ಪ್ರಾಧ್ಯಾಪಕ ಪ್ರೊ.ಕೆ.ವೈ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಎಚ್‍ಎಸ್‍ಆರ್ ಬಡಾವಣೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ ಹಾಗೂ ಎನ್‍ಎಸ್‍ಎಸ್ ಸಮಿತಿ ವತಿಯಿಂದ ಆಯೋಜಿಸಿದ್ದ ರಂಗ ತರಬೇತಿ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆಯ ಕಲಿಕೆಯ ಒಂದು ಭಾಗವಾಗಿ ರಂಗ ಪಠ್ಯವನ್ನು ಅಳವಡಿಸಿ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಭಾಗಿದಾರರನ್ನಾಗಿಸಬೇಕಿದೆ. ತರಗತಿಗಳಲ್ಲಿ ಪಠ್ಯಗಳನ್ನು ರಂಗಭೂಮಿ ಲಕ್ಷಣಗಳೊಂದಿಗೆ ಬೋಧಿಸಿದಾಗ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಹೇಳಿದರು.

ವಿಭಿನ್ನ ಸಾಮಾಜಿಕ ಹಿನ್ನೆಲೆಗಳಿಂದ ಬರುವ ವಿದ್ಯಾರ್ಥಿಗಳು ಒಟ್ಟುಗೂಡಿ ಕಲಿಯುವ, ಕಲಿಸುವ ಅವಕಾಶವಿರುವುದು ರಂಗಭೂಮಿಯಲ್ಲಿ ಮಾತ್ರ. ಬರೀ ಕೇಳುಗರಾಗಿ ರೂಪುಗೊಳ್ಳುತ್ತಿರುವ ವಿದ್ಯಾರ್ಥಿಗಳನ್ನು ಭಾಗಿದಾರರನ್ನಾಗಿಸುವುದು ರಂಗಭೂಮಿಯ ವಿಶೇಷತೆ. ತನ್ನನ್ನು ತಾನು ಅರಿಯುವ, ಹೃದಯ ಹಾಗೂ ಭಾವಗಳ ಮನನ ಮಾಡಿಸುವ ಶಕ್ತಿ ರಂಗಭೂಮಿಗೆ ಇದೆ. ಅನೇಕ ಸಾಮಾಜಿಕ ಸುಧಾರಕರ ವಿಚಾರಗಳು, ಹೋರಾಟಗಳು ಇದ್ದಗಾಲೂ ಸಾಮಾಜಿಕ ಬದಲಾವಣೆ, ಸಾಮರಸ್ಯ ಸಾಧ್ಯವಾಗಿದಿರುವುದಕ್ಕೆ ಪ್ರಸ್ತುತವಿರುವ ಶಿಕ್ಷಣ ವ್ಯವಸ್ಥೆಯು ಒಂದು ಕಾರಣ ಎಂದು ನಾರಾಯಣಸ್ವಾಮಿ ನುಡಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ರಾಗಿಣಿ ಎನ್ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿರುವ ರಂಗವೇದಿಕೆಗಳನ್ನು ಬಳಸಿಕೊಳ್ಳುವ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ರಂಗಭೂಮಿ ಮನುಷ್ಯರನ್ನು ಸಂವೇದನಾಶೀಲಗೊಳಿಸುತ್ತದೆ. ರಂಗಭೂಮಿ ಚಟುವಟಿಕೆಗಳು ಚಲನಶೀಲವಾದದ್ದು ಅರ್ಥೈಸಿ ಕಲಿಸುವಂಥ ಮನುಷ್ಯತ್ವದ ಎದೆಯ ದನಿಯೇ ರಂಗಭೂಮಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಲಕ್ಷ್ಮಿ ಕೆ., ಶ್ರೀಪಾಪಣ್ಣ ಸಿ., ಪ್ರೊ.ಚಂದ್ರಕಲಾ, ಡಾ.ಭೈರೇಗೌಡ ಎಂ., ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News