×
Ad

ಉದಯಗಿರಿ ಪ್ರಕರಣ: 'ಮೈಸೂರು ಚಲೋ' ನಡೆಸಲು ರಾಷ್ಟ್ರ ಸುರಕ್ಷ ಜನಾಂದೋಲನ ಸಮಿತಿಗೆ ಹೈಕೋರ್ಟ್ ಪೀಠದಿಂದ ಷರತ್ತುಬದ್ಧ ಅನುಮತಿ

Update: 2025-02-24 13:56 IST

ಬೆಂಗಳೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ಆವರಣದಲ್ಲಿ ಇತ್ತೀಚೆಗೆ ನಡೆದ ಕಲ್ಲು ತೂರಾಟ ಪ್ರಕರಣವನ್ನು ಖಂಡಿಸಿ ರಾಷ್ಟ್ರ ಸುರಕ್ಷ ಜನಾಂದೋಲನ ಸಮಿತಿ ನಡೆಸಲುದ್ದೇಶಿಸಿದ್ದ 'ಮೈಸೂರು ಚಲೋ'ಗೆ ಹೈಕೋರ್ಟ್ ಪೀಠ ಷರತ್ತುಬದ್ಧ ಅನುಮತಿ ನೀಡಿದೆ.

ಮೈಸೂರು ಚಲೋಗೆ ಅನುಮತಿ ಕೋರಿ ರಾಷ್ಟ್ರೀಯ ಸುರಕ್ಷಾ ಜನಾಂದೋಲನ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇಂದು ವಿಚಾರಣೆ ನಡೆಸಿತು. ಇಂದು(ಫೆ.24) ಅಪರಾಹ್ನ 3:30ಕ್ಕೆ ಸೀಮಿತ ಅವಧಿಯಲ್ಲಿ ಮೈಸೂರಿನ ಫುಟ್ಬಾಲ್ ಮೈದಾನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅರ್ಜಿದಾರ ಸಂಘಟನೆಗೆ ಅನುಮತಿ ನೀಡಲು ಏಕಸದಸ್ಯ ನ್ಯಾಯಪೀಠವು ಮೈಸೂರು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ.

ಒಂದು ಲಕ್ಷ ರೂ. ಬಾಂಡ್ ನೀಡಲು ಆಯೋಜಕರಿಗೆ ನಿರ್ದೇಶಿಸಿರುವ ಹೈಕೋರ್ಟ್, ಪ್ರತಿಭಟನೆ ಶಾಂತಿಯುತವಾಗಿರಬೇಕು, ಸಂಪೂರ್ಣ ಚಿತ್ರೀಕರಣ ಮಾಡಬೇಕು, ಶಾಂತಿಭಂಗವಾಗುವಂತಹ ಪ್ರಚೋದನಕಾರಿ ಹೇಳಿಕೆ ನೀಡಬಾರದು, ಅಹಿತಕರ ಘಟನೆಗಳು ಸಂಭವಿಸಿದರೆ ಅರ್ಜಿದಾರರೇ ಹೊಣೆ ಎಂದು ಷರತ್ತು ವಿಧಿಸಿದೆ.

ಪ್ರತಿಭಟನೆ ನಡೆಯುವ ಜಾಗಕ್ಕೆ ಸೀಮಿತವಾಗಿ 144 ಸೆಕ್ಷನ್ ತೆರವುಗೊಳಿಸಬೇಕು ಎಂದೂ ಆಯುಕ್ತರಿಗೆ ಪೀಠ ಸೂಚಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News