×
Ad

ಯಡಿಯೂರಪ್ಪ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ದೂರುದಾರ ಮಹಿಳೆ ಮೃತ್ಯು

Update: 2024-05-27 15:19 IST

PC: PTI

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಅಪ್ರಾಪ್ತ ಮಗಳ ಪರವಾಗಿ ದೂರು ನೀಡಿದ್ದ ದೂರುದಾರ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.

ದೂರುದಾರ ಮಹಿಳೆಯು ಕಳೆದ ಕೆಲವು ವರ್ಷಗಳಿಂದ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಅವರು ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಸಂಬಂಧ ಯಡಿಯೂರಪ್ಪ ವಿರುದ್ಧ ಇತ್ತೀಚೆಗೆ ಅಪ್ರಾಪ್ತ ಬಾಲಕಿಯ ತಾಯಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಎಫ್​ಐಆರ್ ಕೂಡ ದಾಖಲಿಸಿದ್ದರು.

ಯಡಿಯೂರಪ್ಪ ವಿರುದ್ಧ ಮಹಿಳೆ ನೀಡಿದ ದೂರಿನ ವಿವರ

"ನನ್ನ ಮಗಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಎಸ್‌ ಐಟಿ ಗೆ ವಹಿಸುವಂತೆ ಆಗ್ರಹಿಸಿ ಫೆಬ್ರವರಿ 2 ರಂದು ಯಡಿಯೂರಪ್ಪ ಅವರ ಬಳಿ ನಾನು ಮತ್ತು ಮಗಳು ತೆರಳಿದ್ದ ವೇಳೆ ಲೈಂಗಿಕ ದೌರ್ಜನ್ಯದ ಘಟನೆ ನಡೆದಿದೆ. 9 ನಿಮಿಷಗಳ ಕಾಲ ನಮ್ಮೊಂದಿಗೆ ಮಾತನಾಡಿದ್ದ‌ ಅವರು, ನನ್ನ ಮಗಳ ಕೈ ಹಿಡಿದುಕೊಂಡಿದ್ದರು. ನನ್ನ ಮಗಳು ಯಡಿಯೂರಪ್ಪ ಅವರನ್ನು ʼತಾತʼ ಅಂತಲೇ ಕರೆದು ಮಾತನಾಡುತ್ತಿದ್ದಳು. ನಂತರ ಮಗಳನ್ನು ರೂಮ್‌ ಗೆ ಕರೆದುಕೊಂಡು ಹೋದ ಅವರು ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ" ಎಂದು 17 ವರ್ಷದ ಅಪ್ರಾಪ್ತೆಯ ತಾಯಿ, ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News