ಬೆಳಗಾವಿಯಲ್ಲಿ 593 ಕೋಟಿ ರೂ. ಮೌಲ್ಯದ ನಕಲಿ ಇನ್‌ವಾಯ್ಸ್ ಹಗರಣ ಪತ್ತೆ
ಜಿಎಸ್‌ಟಿ ಪ್ರಾಕ್ಟಿಷನರ್ ಬಂಧನ : 235 ಕೋಟಿ ರೂ. ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ವಂಚನೆ ಆರೋಪ
ಸಾಂದರ್ಭಿಕ ಚಿತ್ರ
ಬೆಳಗಾವಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಗುಪ್ತಚರ ಮಹಾನಿರ್ದೇಶನಾಲಯ (ಡಿಜಿಜಿಐ) ಬೆಳಗಾವಿ ವಲಯ ಘಟಕದ ಅಧಿಕಾರಿಗಳು ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಅವರು ಸುಮಾರು 593 ಕೋಟಿ ರೂ. ಮೌಲ್ಯದ ನಕಲಿ ಇನ್‌ವಾಯ್ಸ್ ಹಗರಣವನ್ನು ಭೇದಿಸಿ, ಈ ವಂಚನೆಯ ಸೂತ್ರಧಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಪ್ರಕರಣದ ಪ್ರಮುಖ ಆರೋಪಿಯಾಗಿ ಗುರುತಿಸಲಾದ ಜಿಎಸ್‌ಟಿ ಪ್ರ್ಯಾಕ್ಟಿಷನರ್ (ಜಿಎಸ್‌ಟಿ ಸಂಬಂಧಿತ ತೆರಿಗೆ ಕೆಲಸಗಳನ್ನು ನಿರ್ವಹಿಸಲು ಅನುಮತಿ ಪಡೆದ ವ್ಯಕ್ತಿ) ಮುಹಮ್ಮದ್ ಸೈಫುಲ್ಲಾನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಡಿಜಿಜಿಐ ಅಧಿಕಾರಿಗಳ ತಂಡವು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಶೆಲ್ ಕಂಪೆನಿಗಳ ಮೂಲಕ ವಂಚನೆ:
ಒಂದು ಅನುಮಾನಾಸ್ಪದ ಜಿಎಸ್‌ಟಿ ನೋಂದಣಿಯ ಪರಿಶೀಲನೆಯಿಂದ ಆರಂಭವಾದ ತನಿಖೆಯು ದೊಡ್ಡ ಮಟ್ಟದ ವಂಚನೆಯ ಜಾಲವನ್ನೇ ಬಯಲಿಗೆಳೆದಿದೆ. ಬೆಂಗಳೂರು ನಗರದಲ್ಲಿನ ಸ್ಟಾರ್ ಟ್ಯಾಕ್ಸ್ ಕನ್ಸಲ್ಟೆಂಟ್‌ಗೆ ಸಂಬಂಧಿಸಿದ ವಿವಿಧ ಕಚೇರಿಗಳು ಮತ್ತು ವಾಸಸ್ಥಳಗಳ ಮೇಲೆ ದಾಳಿ ನಡೆಸಿದಾಗ ಯಾವುದೇ ವಾಸ್ತವಿಕ ಸರಕು ಅಥವಾ ಸೇವೆಗಳ ಪೂರೈಕೆ ಇಲ್ಲದೆ, ಕೇವಲ ಕಾಗದದ ಮೇಲಿನ ವ್ಯವಹಾರಗಳ ಮೂಲಕ ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಲಾಗುತ್ತಿದ್ದ ಅಚ್ಚರಿಯ ಸಂಗತಿ ಬಹಿರಂಗವಾಗಿದೆ.
ಅಧಿಕಾರಿಗಳ ಪ್ರಾಥಮಿಕ ಅಂದಾಜಿನ ಪ್ರಕಾರ, ಈ ಜಾಲವು ಸುಮಾರು 593 ಕೋಟಿ ರೂ. ಮೌಲ್ಯದ ನಕಲಿ ಬಿಲ್‌ಗಳನ್ನು ಹೊರಡಿಸಿದೆ. ಈ ಮೂಲಕ ಸುಮಾರು 235 ಕೋಟಿ ರೂ.ಯಷ್ಟು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಅನ್ನು ಅನ್ಯಾಯವಾಗಿ ಪಡೆದು ಇತರರಿಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.
ಹೇಗೆ ನಡೆಯುತ್ತಿತ್ತು ವಂಚನೆ?
ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಬಯಲಾಗಿದೆ. ಯಾವುದೇ ನಿಜವಾದ ವ್ಯಾಪಾರ ಚಟುವಟಿಕೆಗಳೇ ಇಲ್ಲದ ಅನೇಕ ಶೆಲ್ ಕಂಪೆನಿಗಳ ಹೆಸರಿನಲ್ಲಿ ಜಿಎಸ್‌ಟಿ ನೋಂದಣಿಗಳನ್ನು ಪಡೆಯಲಾಗಿತ್ತು. ಆನ್‌ಲೈನ್ ಲೆಕ್ಕಪತ್ರ ಸಾಫ್ಟ್‌ವೇರ್‌ಗಳ ಮೂಲಕ ನಕಲಿ ವ್ಯವಹಾರಗಳನ್ನು ದಾಖಲಿಸಿ, ಇ-ವೇ ಬಿಲ್‌ಗಳನ್ನು ಸೃಷ್ಟಿಸಿ, ಅಂತಿಮವಾಗಿ ಲಾಭಾಂಶ ಪಡೆಯುವವರಿಗೆ (ಬೆನಿಫಿಶಿಯರೀಸ್) ಐಟಿಸಿ ಪಡೆಯಲು ವ್ಯವಸ್ಥಿತವಾಗಿ ಸಹಾಯ ಮಾಡಲಾಗುತ್ತಿತ್ತು.
ಮುಹಮ್ಮದ್ ಸೈಫುಲ್ಲಾ ಈ ವಂಚನೆಯ ನಡುವಿನ ಪ್ರಮುಖ ಕೊಂಡಿಯಾಗಿದ್ದು, ನಕಲಿ ಇನ್‌ವಾಯ್ಸ್ ಮೌಲ್ಯದ ಶೇಕಡಾವಾರು ಕಮಿಷನ್ ಪಡೆದುಕೊಂಡು ಈ ಸಂಪೂರ್ಣ ಕಾರ್ಯಾಚರಣೆಯನ್ನು ನಡೆಸುತ್ತಿದ್ದನು ಎಂಬುದು ಅಧಿಕಾರಿಗಳ ತನಿಖೆಯಲ್ಲಿ ದೃಢವಾಗಿದೆ.
ಈ ಜಾಲದಿಂದ ಲಾಭಾಂಶ ಪಡೆದ ಇತರ ವ್ಯಕ್ತಿಗಳು ಮತ್ತು ಸಂಸ್ಥೆಗಳ ಪತ್ತೆಗಾಗಿ ಡಿಜಿಜಿಐ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ಹಗರಣದ ಪೂರ್ಣ ಪ್ರಮಾಣ ಮತ್ತು ಸರಕಾರಕ್ಕೆ ಸಂಭವಿಸಿರುವ ನಿಖರವಾದ ಹಣಕಾಸಿನ ನಷ್ಟದ ಅಂತಿಮ ಲೆಕ್ಕಾಚಾರ ಇನ್ನಷ್ಟೇ ಹೊರಬೀಳಬೇಕಿದೆ.
ಜಿಎಸ್‌ಟಿ ವಂಚನೆ ವಿರುದ್ಧ ಕೇಂದ್ರ ಸರಕಾರದ ಕಟ್ಟುನಿಟ್ಟಿನ ನಿಲುವಿನ ನಡುವೆಯೇ, ಬೆಳಗಾವಿ ಡಿಜಿಜಿಐ ಘಟಕದ ಈ ಕಾರ್ಯಾಚರಣೆಯು ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದು ತೆರಿಗೆ ವಂಚಕರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.