×
Ad

ಚಿಕ್ಕೋಡಿ ಜಿಲ್ಲೆ ಮಾಡುವ ಬಗ್ಗೆ ಶೀಘ್ರ ತೀರ್ಮಾನ : ಡಿ.ಕೆ.ಶಿವಕುಮಾರ್

Update: 2026-03-05 21:14 IST

ಡಿ.ಕೆ.ಶಿವಕುಮಾರ್

ಬೆಳಗಾವಿ : ಚಿಕ್ಕೋಡಿ ಜಿಲ್ಲೆ ಆಗಬೇಕು ಎಂಬ ಆಸೆ ನನಗೂ ಇದೆ. ಆದಷ್ಟು ಬೇಗ ನಾವು ತೀರ್ಮಾನ ಮಾಡುತ್ತೇವೆ. ಪ್ರಕಾಶ್ ಹುಕ್ಕೇರಿ ಹಾಗೂ ಗಣೇಶ್ ಹುಕ್ಕೇರಿ ಈ ಭಾಗದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಇಟ್ಟಿರುವ ಎಲ್ಲ ಬೇಡಿಕೆ ಈಡೇರಿಸಲು ನಾನು ಬದ್ಧನಾಗಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಗುರುವಾರ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮೋತ್ಥಾನ ಸಮ್ಮೇಳನ ಹಾಗೂ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಭಾಗ ಅಭಿವೃದ್ಧಿಯಾಗಬೇಕು ಹಾಗೂ ಇಲ್ಲಿನ ರೈತರನ್ನು ಕಾಪಾಡುವ ಕೆಲಸ ಮಾಡಲಾಗುವುದು. ನಿಮ್ಮ ಆಶೀರ್ವಾದ ನನ್ನ ಮೇಲೆ, ನಮ್ಮ ಸರಕಾರದ ಮೇಲೆ ಇರಲಿ ಎಂದು ಮನವಿ ಮಾಡಿದರು.

ರಂಭಾಪುರಿ, ಉಜ್ಜಯಿನಿ, ಕಾಶೀ, ಶ್ರೀಶೈಲ ಸೇರಿದಂತೆ ನಮ್ಮ ಪಂಚ ಪೀಠದ ಶ್ರೀಗಳು ಇಡೀ ದೇಶಕ್ಕೆ ಶಕ್ತಿ ನೀಡುತ್ತಾ ಬಂದಿದ್ದಾರೆ. ಸಮಾಜಕ್ಕೆ ಈ ಪೀಠಗಳ ಮಾರ್ಗದರ್ಶನ ಅಗತ್ಯವಿದ್ದು, ನಾವು ಈ ಮಠಗಳಿಗೆ ಪ್ರೋ ತ್ಸಾಹ ನೀಡಬೇಕು. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಕರೆ ನೀಡಿದರು.

ದೇವರು ವರ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಈ ಭಾಗದ ಶಾಸಕರಾದ ಪ್ರಕಾಶ್ ಹುಕ್ಕೇರಿ ಹಾಗೂ ಅವರ ಸುಪುತ್ರ ಗಣೇಶ್ ಹುಕ್ಕೇರಿ ಈ ಭಾಗದ ಅಭಿವೃದ್ಧಿಗೆ ಶ್ರೀಗಳ ಮಾರ್ಗದರ್ಶನದಲ್ಲಿ ಈ ಧರ್ಮ ಕ್ಷೇತ್ರದ ಕಲ್ಯಾಣ ಮಾಡಿಕೊಂಡು ಬರುತ್ತಿದ್ದಾರೆ ಎಂದು ಅವರು ನುಡಿದರು.

ಬಜೆಟ್‍ನಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾವು ಈಗಾಗಲೇ ಮಾಡಿರುವ ತೀರ್ಮಾನ, ಐತಿಹಾಸಿಕವಾದದ್ದು. ಕೃಷ್ಣ ಮೇಲ್ದಂಡೆ ಯೋಜನೆ ಮುಳುಗಡೆ ಪ್ರದೇಶದ ಜನರಿಗೆ ಪರಿಹಾರವಾಗಿ 70 ಸಾವಿರ ಕೋಟಿ ರೂ.ನೀಡಲು ತೀರ್ಮಾನಿಸಿದ್ದೇವೆ ಎಂದ ಅವರು, ಈ ಯೋಜನೆಗೆ ಮಹಾರಾಷ್ಟ್ರ ಹಾಗೂ ಆಂಧ್ರ ಅಡ್ಡಿಪಡಿಸುತ್ತಿದ್ದು, ಈ ಬಗ್ಗೆ ದಿಲ್ಲಿಯಲ್ಲಿ ಸಭೆ ಮಾಡುತ್ತೇನೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News