×
Ad

ಬೆಳಗಾವಿಯಲ್ಲಿ ಮತ್ತೊಂದು ಸೈಬರ್ ವಂಚನೆ; ವಿದೇಶಿ ಉದ್ಯೋಗದ ಆಮಿಷವೊಡ್ಡಿ ಯುವಕರ ಬ್ಯಾಂಕ್ ಖಾತೆ ದುರುಪಯೋಗ

Update: 2026-03-01 00:34 IST

ಸಾಂದರ್ಭಿಕ ಚಿತ್ರ | PC : freepik

ಬೆಳಗಾವಿ : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಸಿಕೊಂಡು, ಅದರ ಮೂಲಕ ಸೈಬರ್ ವಂಚನೆಯ ಹಣ ವರ್ಗಾವಣೆ ಮಾಡಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಗರದ ಸಿಇಎನ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ನಾಲ್ವರು ಯುವಕರು ವಂಚನೆಗೊಳಗಾಗಿರುವುದು ವರದಿಯಾಗಿದೆ.

ಪೀರನವಾಡಿ ನಿವಾಸಿಗಳಾದ ಪ್ರಥಮೇಶ ರಮೇಶ ದೇಸಾಯಿ(21), ಭಂಡು ಇಂಗಳ, ಕಿರಣ ಸುರೇಶ ದೇಸಾಯಿ ಮತ್ತು ಕಿಣೆಯೆ ಅನಿಲ ಬಹುಸಾಹೇಬ ಪಾಟೀಲ ಎಂಬವರು ಈ ವಂಚನೆಗೊಳಗಾದ ಯುವಕರು. ಖಾಸಗಿ ಏಜೆಂಟರ ನಂಬಿಕೆಗೆ ಬಿದ್ದ ಇವರು ತಮ್ಮ ಭವಿಷ್ಯದ ಕನಸನ್ನು ನನಸಾಗಿಸಿಕೊಳ್ಳಲು ಹೊರಟಿದ್ದರು, ಆದರೆ ಅದು ಅವರಿಗೆ ದೊಡ್ಡ ಮೋಸದ ಪಾಠವಾಗಿ ಪರಿಣಮಿಸಿದೆ.

ವಂಚನೆಗೊಳಗಾದ ಪ್ರಥಮೇಶ ದೇಸಾಯಿ ಅವರು ನಗರದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳಾದ ಕಿಣೆಯೆ ಲಕ್ಷ್ಮಣ ಸಂದೀಪ್ ದೇಸಾಯಿ ಮತ್ತು ಕೊಲ್ಲಾಪುರದ ಸುಮಿತ್ ಶಿಂಧೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಠಾಣೆಯ ಪೊಲೀಸರು ಆರೋಪಿಗಳಾದ ಲಕ್ಷ್ಮಣ ದೇಸಾಯಿ ಮತ್ತು ಸುಮಿತ್ ಶಿಂಧೆ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬ್ಯಾಂಕ್ ವಹಿವಾಟುಗಳ ವಿವರ ಪಡೆಯಲು ಬ್ಯಾಂಕ್‌ಗಳಿಗೆ ಪತ್ರ ಬರೆಯಲಾಗಿದೆ. ಯುವಕರ ಭವಿಷ್ಯದ ಕನಸನ್ನು ಬಂಡವಾಳವಾಗಿಸಿಕೊಂಡು ನಡೆಸಲಾದ ಈ ವಂಚನೆ ಪ್ರಕರಣದ ತನಿಖೆಗೆ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಸೈಬರ್ ವಂಚನೆಯ ಈ ಜಾಲಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News