Belagavi | ಮಾರಕಾಸ್ತ್ರಗಳಿಂದ ಕೊಚ್ಚಿ, ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಭೀಕರ ಹತ್ಯೆ
ಸಾಂದರ್ಭಿಕ ಚಿತ್ರ | Gemini AI
ಬೆಳಗಾವಿ : ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾದ ವ್ಯಕ್ತಿಯ ಮೃತದೇಹ ಮೆಕ್ಕೆಜೋಳದ ಗದ್ದೆಯಲ್ಲಿ ಪತ್ತೆಯಾಗಿದೆ.
ಮೃತರನ್ನು ಅದೇ ಗ್ರಾಮದ ಕಲ್ಮೇಶ್ ಕೋಟಿ (50) ಎಂದು ಗುರುತಿಸಲಾಗಿದೆ. ಅವರು ತುಮಕೂರಿನಲ್ಲಿ ಹೋಮ್ ಕೇರ್ ನೌಕರರಾಗಿದ್ದು, ಸುಮಾರು ಹತ್ತು ದಿನಗಳ ಹಿಂದೆಯಷ್ಟೇ ಸ್ವಗ್ರಾಮಕ್ಕೆ ಬಂದಿದ್ದರು. ನಾಲ್ಕು ದಿನಗಳ ಹಿಂದೆ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳು ಕಲ್ಮೇಶ್ ಅವರನ್ನು ಮಾರಕಾಸ್ತ್ರಗಳಿಂದ ಕ್ರೂರವಾಗಿ ಹತ್ಯೆಗೈದು, ಬಳಿಕ ಮರ್ಮಾಂಗ ಕತ್ತರಿಸಿ ವಿಕೃತಿ ಮೆರೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.