×
Ad

Belagavi | ನ್ಯಾಯಾಲಯ ಆವರಣದಲ್ಲೇ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ: ಪತಿಗೆ 10 ವರ್ಷ ಜೈಲು ಶಿಕ್ಷೆ

Update: 2026-02-21 23:41 IST

ಸಾಂದರ್ಭಿಕ ಚಿತ್ರ 

ಬೆಳಗಾವಿ: ನ್ಯಾಯಾಲಯದ ಆವರಣದಲ್ಲಿಯೇ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಪತಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಬೆಳಗಾವಿಯ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ತೀರ್ಪು ಪ್ರಕಟಿಸಿದೆ.

ಬೈಲಹೊಂಗಲ ತಾಲ್ಲೂಕಿನ ನನಗೊಂಡಿಕೊಪ್ಪ ಗ್ರಾಮದ ಶಿವಪ್ಪ ನಿಂಗಪ್ಪ ಅಡಕಿ ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದಾನೆ. ಇವನು ತನ್ನ ಪತ್ನಿ ಜಯಮಾಲಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಆರೋಪಿ ಶಿವಪ್ಪ ಮತ್ತು ಅವನ ಪತ್ನಿ ಜಯಮಾಲಾ ಅವರ ನಡುವೆ ದಾಂಪತ್ಯ ಕಲಹ ನಡೆದಿತ್ತು. ಈ ಸಂಬಂಧ ಬೈಲಹೊಂಗಲ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಪ್ರಕರಣದ ವಿಚಾರಣೆಗಾಗಿ 2021ರ ಅಕ್ಟೋಬರ್ 29ರಂದು ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಹೊರ ಬರುತ್ತಿದ್ದಂತೆ ನ್ಯಾಯಾಲಯದ ಆವರಣದಲ್ಲಿಯೇ ಶಿವಪ್ಪ ತನ್ನ ಪತ್ನಿ ಜಯಮಾಲಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದನು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುಭಾಷ ಸಂಕದ ಅವರು, ಭಾರತೀಯ ದಂಡ ಸಂಹಿತೆಯ ಕಲಂ 307 (ಕೊಲೆ ಯತ್ನ) ಅಡಿಯಲ್ಲಿ ಆರೋಪಿ ಶಿವಪ್ಪ ನಿಂಗಪ್ಪ ಅಡಕಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡವನ್ನು ಪಾವತಿಸದಿದ್ದಲ್ಲಿ ಆರೋಪಿ ಮತ್ತು ಮೂರು ತಿಂಗಳ ಹೆಚ್ಚುವರಿ ಸಾದಾ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೃಷ್ಣಾ ನಾರಾಯಣ ಪಾಟೀಲ ಅವರು ವಾದ ಮಂಡಿಸಿದ್ದರು. ಸಂತ್ರಸ್ತೆ ಜಯಮಾಲಾ ಅವರು ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News