×
Ad

ಬೆಳಗಾವಿ | ಸಾರ್ವಜನಿಕ ಸ್ಥಳದಲ್ಲಿ ಖಡ್ಗದಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ: ಇಬ್ಬರ ಬಂಧನ

Update: 2026-02-26 12:02 IST

ಬೆಳಗಾವಿ : ಸಾರ್ವಜನಿಕ ಸ್ಥಳದಲ್ಲಿ ಖಡ್ಗ ಬಳಸಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಆರೋಪದಲ್ಲಿ ಇಬ್ಬರನ್ನು ಕಿತ್ತೂರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಯರಗಟ್ಟಿ ತಾಲೂಕಿನ ಕಡಬಿ ಗ್ರಾಮದ ಮೂಲ ನಿವಾಸಿಯಾಗಿದ್ದು, ಪ್ರಸಕ್ತ ಎಂ.ಕೆ. ಹುಬ್ಬಳ್ಳಿಯಲ್ಲಿ ವಾಸವಾಗಿರುವ ಝೈದ್ ನೂರ್ ಅಹ್ಮದ್ ಸನದಿ ಮತ್ತು ರೆಹಾನ್ ಮುಸ್ತಾಕ್ ಅಹ್ಮದ್ ಬಡೇಘರ್ ಬಂಧಿತ ಆರೋಪಿಗಳು.

ಫೆಬ್ರವರಿ 24ರ ರಾತ್ರಿ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48ರ ಬದಿಯಲ್ಲಿರುವ ಎಚ್.ಪಿ. ಪೆಟ್ರೋಲ್ ಪಂಪ್ ಬಳಿ ಝೈದ್ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ತಬ್ರೇಝ್ ಹನೀಫ್ ಖಾದ್ರಿ ಎಂಬಾತ ಝೈದ್ ನನ್ನು ಬೈಕಿನಲ್ಲಿ ಸ್ಥಳಕ್ಕೆ ಕರೆತಂದಿದ್ದಾನೆ. ಈ ವೇಳೆ ಮೋಟರ್ ಸೈಕಲ್ ಮೇಲೆ ಸುಮಾರು ಐದು ಕೇಕ್ ಗಳನ್ನು ಇರಿಸಿ, ಖಡ್ಗ ಬಳಸಿ ಅವುಗಳನ್ನು ಝೈದ್ ಕತ್ತರಿಸಿದ್ದಾನೆ. ಇದರ ವಿಡಿಯೋವನ್ನು ರೆಹಾನ್ ಮುಸ್ತಾಕ್ ಅಹ್ಮದ್ ಬಡೇಘರ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾನೆ. ಯಾವುದೇ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಪ್ರದರ್ಶನ ಮತ್ತು ಬಳಕೆ ಮಾಡಿರುವುದು ಕಾನೂನುಬಾಹಿರ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 68/2026ರಂತೆ ಭಾರತೀಯ ಆಯುಧ ಕಾಯ್ದೆ 1959ರ ಕಲಂ 25 ಮತ್ತು 27ರ ಅಡಿಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಆರೋಪಿಗಳನ್ನು ಫೆ.25ರಂದು ಬಂಧಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರಗಳನ್ನು ಪ್ರದರ್ಶಿಸುವುದು ಮತ್ತು ಬಳಸುವುದು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಇಂತಹ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News