×
Ad

Belagavi | ಮಕ್ಕಳ ಕಳ್ಳಿ ಎಂದು ಆರೋಪಿಸಿ ಮಹಿಳೆಗೆ ಹಲ್ಲೆ

Update: 2026-03-01 00:25 IST

ಬೆಳಗಾವಿ, ಫೆ.28: ನಗರದಲ್ಲಿ ಹರಿದಾಡುತ್ತಿರುವ ‘ಮಕ್ಕಳ ಕಳ್ಳರ’ ವದಂತಿಯ ಹಿನ್ನೆಲೆಯಲ್ಲಿ ಭಿಕ್ಷೆ ಬೇಡಲು ಬಂದ ಮಹಿಳೆಯೊಬ್ಬರನ್ನು ಮಕ್ಕಳ ಕಳ್ಳಿ ಎಂದು ಶಂಕಿಸಿ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ನಗರದ ನ್ಯೂ ಗಾಂಧಿ ನಗರದಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ.

ಈ ಘಟನೆಯಿಂದಾಗಿ ಸ್ವಲ್ಪಹೊತ್ತು ಆ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿವರ್ಷದಂತೆ ಈ ಬಾರಿಯೂ ರಮಝಾನ್ ಸಂದರ್ಭದಲ್ಲಿ ಭಿಕ್ಷೆ ಸಂಗ್ರಹಿಸಲು ಬಂದಿದ್ದ ಮಹಿಳೆಯನ್ನು ಸ್ಥಳೀಯ ಮಹಿಳೆಯರು ಆಕೆಯನ್ನು ಮಕ್ಕಳ ಅಪಹರಣಕಾರ್ತಿ ಎಂದು ಆರೋಪಿಸಿ ಥಳಿಸಲಾರಂಭಿಸಿದರು.

ಘಟನೆಯ ಮಾಹಿತಿ ತಿಳಿದ ತಕ್ಷಣ ಮಾಳಮಾರುತಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಆಕ್ರೋಶಗೊಂಡಿದ್ದ ಜನರ ಮಧ್ಯೆ ನುಗ್ಗಿ ಪರಿಸ್ಥಿತಿಯನ್ನು ಹತೋಟಿಗೆ ತರಬೇಕಾಯಿತು. ಪೊಲೀಸರು ಆ ಭಿಕ್ಷುಕ ಮಹಿಳೆಯನ್ನು ಜನರ ಕೈಯಿಂದ ಬಿಡಿಸಿ ವಶಕ್ಕೆ ತೆಗೆದುಕೊಂಡು, ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಗದರಿಸಿ ಚದುರಿಸಿದರು. ನಂತರ ನಡೆಸಿದ ವಿಚಾರಣೆಯಲ್ಲಿ ಆ ಮಹಿಳೆ ಸಂಪೂರ್ಣ ನಿರಪರಾಧಿ ಎಂದು ತಿಳಿದುಬಂದಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಸ್ವತಃ ಮಾಧ್ಯಮದ ಮುಂದೆ ಬಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಯಾವುದೇ ಅನಾಮಧೇಯ ಮತ್ತು ದೃಢೀಕರಿಸದ ಆಡಿಯೊ ಅಥವಾ ಸಂದೇಶಗಳನ್ನು ಸಾರ್ವಜನಿಕರು ನಂಬಬಾರದು. ನಿಮಗೆ ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ಚಟುವಟಿಕೆ ಕಂಡುಬಂದರೆ, ದಯವಿಟ್ಟು ತಕ್ಷಣವೇ ನಮ್ಮ ಸಹಾಯವಾಣಿ 100 ಗೆ ಕರೆ ಮಾಡಿ ಮಾಹಿತಿ ನೀಡಿ. ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News