ಬೆಂಗಳೂರು-ಕಲಬುರಗಿ ವಿಮಾನಯಾನ ಮುಂದುವರಿಕೆಗೆ ಹೊಸ ಬಿಡ್ ಆಹ್ವಾನಿಸಲು ಕೇಂದ್ರಕ್ಕೆ ಪತ್ರ : ಎಂ.ಬಿ.ಪಾಟೀಲ್
ಬೆಳಗಾವಿ : ಬೆಂಗಳೂರು-ಕಲಬುರಗಿ ಮಾರ್ಗದಲ್ಲಿ ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ ಸಂಸ್ಥೆಯ ವಿಮಾನಯಾನ ಸೇವೆಯನ್ನು ಮುಂದುವರೆಸಲು ಇಲ್ಲವೇ, ಪ್ರಾದೇಶಿಕ ಸಂಪರ್ಕ ಯೋಜನೆಯ(ಉಡಾನ್) ಅಡಿಯಲ್ಲಿ ಇತರ ಅರ್ಹ ನಿರ್ವಾಹಕರಿಂದ ಹೊಸದಾಗಿ ಬಿಡ್‍ಗಳನ್ನು ಆಹ್ವಾನಿಸುವಂತೆ ಕೇಂದ್ರ ಸರಕಾರವನ್ನು ಕೋರಿ ಪತ್ರ ಬರೆಯಲಾಗಿದೆ ಎಂದು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು-ಕಲಬುರಗಿ ಮಾರ್ಗದಲ್ಲಿ ಸೇವೆಯನ್ನು ಒದಗಿಸುತ್ತಿದ್ದ ಮೆ:Ghodawat ಸಂಸ್ಥೆಯು(ಸ್ಟಾರ್ ಏರ್) ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಬೇಡಿಕೆಯು ಕಡಿಮೆಯಾಗಿರುವ ಕಾರಣ 2025ರ ಅಕ್ಟೋಬರ್ 15ರಂದು ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿಸಿದರು.
ಬೀದರ್ ವಿಮಾನಯಾನ ಸೇವೆಗೆ 35 ಕೋಟಿ ವೆಚ್ಚ ಮಾತ್ರ : ಈಶ್ವರ್ ಖಂಡ್ರೆ
ಬೆಳಗಾವಿ(ಸುವರ್ಣವಿಧಾನಸೌಧ), ಡಿ.16: ಬೀದರ್ ನಗರಕ್ಕೆ ಉಡಾನ್ ಯೋಜನೆಯಡಿ ಕಲ್ಪಿಸಲಾಗಿದ್ದ ನಾಗರಿಕ ವಿಮಾನಯಾನ ಸೇವೆ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಕಾರಣ, ಜನರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 15 ಕೋಟಿ ರೂ. ನೀಡಿ ಮರು ಆರಂಭ ಮಾಡಲಾಗಿದೆ, ಆದರೆ, ಬೇರೆ ಕಡೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ 300 ಕೋಟಿ, 1000 ಕೋಟಿ ವೆಚ್ಚ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, 1960ರ ದಶಕದಿಂದಲೂ ವಿಮಾನ ನಿಲ್ದಾಣವಿದ್ದು, ಕೇವಲ 20 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ಸಿದ್ಧಪಡಿಸಿ ವಿಮಾನ ಯಾನ ನಡೆಯುತ್ತಿತ್ತು, ಆದರೆ, ಉಡಾನ್ ಯೋಜನೆ 3 ವರ್ಷ ಆದ ಬಳಿಕ ಸ್ಥಗಿತಗೊಂಡಿತ್ತು ಎಂದರು.
ಬೀದರ್ ನಾಗರಿಕ ವಿಮಾನಯಾನ ಸೇವೆಗಾಗಿ ಟರ್ಮಿನಲ್ ಮತ್ತು ಅನುದಾನ ಸೇರಿ ಒಟ್ಟು ವೆಚ್ಚ ಮಾಡಿರುವುದು 35 ಕೋಟಿ ರೂ. ಮಾತ್ರ ಎಂದು ಈಶ್ವರ್ ಖಂಡ್ರೆ ಸದನಕ್ಕೆ ಸ್ಪಷ್ಟನೆ ನೀಡಿದರು.