ಪಿಎಂ ಕುಸುಮ್-ಸಿ ಯೋಜನೆಯಡಿ 3000 ಮೆ.ವ್ಯಾ. ಸಾಮರ್ಥ್ಯದ ಸೌರ ಯೋಜನೆಗಳ ಅನುಷ್ಠಾನ : ಕೆ.ಜೆ.ಜಾರ್ಜ್
ಬೆಳಗಾವಿ : ಪಿಎಂ ಕುಸುಮ್-ಸಿ ಯೋಜನೆಯಡಿ ರಾಜ್ಯಕ್ಕೆ ಎಂಎನ್‍ಆರ್‌ಇ ಯಿಂದ ಹಂಚಿಕೆಯಾಗಿರುವ ಪಂಪ್‍ಸೆಟ್‍ಗಳಿಗೆ ಅನುಗುಣವಾಗಿ ಸುಮಾರು 3000 ಮೆ.ವ್ಯಾ. ಸಾಮರ್ಥ್ಯದ ಸೌರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಟಿ.ಎನ್.ಜವರಾಯಿಗೌಡ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿರುವ ಸಚಿವರು, ರಾಜ್ಯದಲ್ಲಿ ಪಿ.ಎಂ.ಕುಸುಮ್ ಯೋಜನೆಯಲ್ಲಿ ಪ್ರಸ್ತುತ 415 ಸ್ಥಳಗಳಲ್ಲಿ 2592 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳಿಗೆ ಕಾರ್ಯಾದೇಶ ನೀಡಲಾಗಿದೆ ಮತ್ತು ಬಾಕಿ ಉಳಿದ ಸುಮಾರು 410 ಮೆ.ವ್ಯಾ. ಸಾಮರ್ಥ್ಯಕ್ಕೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ಕಾರ್ಯಾದೇಶ ನೀಡಲಾಗಿರುವ ಯೋಜನೆಗಳಲ್ಲಿ 213ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳು ಅನುಷ್ಠಾನಗೊಂಡಿದ್ದು, 1190ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳು ಪ್ರಗತಿಯಲ್ಲಿದ್ದು ಮತ್ತು 1189 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಿದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಯೋಜನೆಗೆ ಸಂಬಂಧಿಸಿದಂತೆ ಇರುವ ಅಡಚಣೆಗಳನ್ನು ನಿವಾರಿಸಲು ಕಾಲ-ಕಾಲಕ್ಕೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ. ಅವಶ್ಯವಿರುವ ಖಾಸಗಿ/ಸರಕಾರಿ ಜಮೀನು ದೊರೆಯದಿದ್ದ ಪಕ್ಷದಲ್ಲಿ, ಕೆರೆ ಅಂಗಳದ ಜಮೀನುಗಳನ್ನು ಗುರುತಿಸಿ. ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮೋದನೆ ಪಡೆದು ಪರಿಸರಕ್ಕೆ ಹಾನಿಯಾಗದಂತೆ ಕೈಗೆತ್ತಿಕೊಳ್ಳಲಾಗಿದೆ ಎಂದು ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಉಪಕೇಂದ್ರಗಳ ಬಳಿ ಸೂಕ್ತ ಸರಕಾರಿ ಜಮೀನು ಲಭ್ಯವಿರುವ ಸ್ಥಳಗಳಲ್ಲಿ ಸರಕಾರಿ ಜಮೀನನ್ನು ಈ ಯೋಜನೆಗೆ ಕಾಯ್ದಿರಿಸಲು ಈಗಾಗಲೇ ಕಂದಾಯ ಹಾಗೂ ಇಂಧನ ಇಲಾಖೆಗಳಿಂದ ಜಂಟಿ ಸುತ್ತೋಲೆಯನ್ನು ಹೊರಡಿಸಲಾಗಿದೆ. ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಕಾಯ್ದಿರಿಸಿದ ಸರಕಾರಿ ಜಮೀನುಗಳಿಗೆ ಪ್ರತಿ ಎಕರೆಗೆ ಪ್ರತಿ ವರ್ಷಕ್ಕೆ 25 ಸಾವಿರ ರೂ. ನಿಗದಿಪಡಿಸಿ ಪ್ರತಿ 2 ವರ್ಷಗಳಿಗೊಮ್ಮೆ ಶೇ.5ರಂತೆ ಸೌರ ಅಭಿವೃದ್ಧಿದಾರರಿಂದ ನಿಗದಿತ ಉಪಯೋಗ ದರ ಸಂಗ್ರಹಿಸಿ, ಸಂಗ್ರಹವಾದ ಹಣದಿಂದ ಎಲ್‍ಎಡಿಎಫ್ ನಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರಕಾರಿ ಆದೇಶ ಹೊರಡಿಸಲಾಗಿದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.