ಬಳ್ಳಾರಿ ಜಿಲ್ಲಾ ವಾಣಿಜ್ಯ, ಕೈಗಾರಿಕಾ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ
ಬಳ್ಳಾರಿ: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ 77ನೇ ಗಣರಾಜ್ಯೋತ್ಸವವನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸುವ ಮೂಲಕ ಭಾನುವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಅವ್ವಾರು ಮಂಜುನಾಥ್, ಭಾರತದಲ್ಲಿ ಸಂವಿಧಾನ ಜಾರಿಯಾದ ದಿನವೇ ಗಣರಾಜ್ಯೋತ್ಸವವಾಗಿದ್ದು, ವಿಶ್ವದ ಅತ್ಯಂತ ಬಲಿಷ್ಠ ಹಾಗೂ ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಭಾರತ ಹೊಂದಿದೆ ಎಂದು ಹೇಳಿದರು.
ಗೌರವ ಕಾರ್ಯದರ್ಶಿ ಕೆ.ಸಿ.ಸುರೇಶ್‌ಬಾಬು ಮಾತನಾಡಿ, ಗಣರಾಜ್ಯೋತ್ಸವವು ಭಾರತೀಯರ ಹೆಮ್ಮೆಯ ರಾಷ್ಟ್ರೀಯ ಹಬ್ಬವಾಗಿದೆ. ಪ್ರತಿಯೊಬ್ಬ ನಾಗರಿಕರೂ ಈ ಹಬ್ಬದ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶಪ್ರೇಮ ಹಾಗೂ ರಾಷ್ಟ್ರೀಯತೆಯನ್ನು ವ್ಯಕ್ತಪಡಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಉಪಾಧ್ಯಕ್ಷ ಎಸ್. ದೊಡ್ಡನಗೌಡ, ಉಪಾಧ್ಯಕ್ಷ ಗಿರಿಧರ ಸೊಂತ, ಜಂಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ಖಜಾಂಚಿ ನಾಗಳ್ಳಿ ರಮೇಶ್, ಮಾಜಿ ಅಧ್ಯಕ್ಷರುಗಳಾದ ಬಿ. ಮಹಾರುದ್ರಗೌಡ, ಡಾ. ರಮೇಶ್ ಗೋಪಾಲ, ಉಪಸಮಿತಿಗಳ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು ಹಾಗೂ ವಿಶೇಷ ಸಮನ್ವಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.