ಬಳ್ಳಾರಿ | ಮಲ್ಚಿಂಗ್, ವಿಡ್‌ಮೇಟ್, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ರೈತರಿಗೆ ಅನುಕೂಲ: ಶಶಿಕಾಂತ್ ಕೋಟಿಮನಿ
ಬಳ್ಳಾರಿ : ರೈತರು ಆಧುನಿಕ ಕೃಷಿ ಪದ್ಧತಿಗಳಾದ ಮಲ್ಚಿಂಗ್, ವಿಡ್‌ಮೇಟ್ ಹಾಗೂ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟದ ಮೆಣಸಿನಕಾಯಿ ಇಳುವರಿ ಪಡೆಯಬಹುದು ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಶಶಿಕಾಂತ್ ಕೋಟಿಮನಿ ಹೇಳಿದರು.
ತೋಟಗಾರಿಕೆ ಇಲಾಖೆ ಹಾಗೂ ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ಬಿಳುಬಾವಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಹೋಬಳಿ ಮಟ್ಟದ ಮೆಣಸಿನಕಾಯಿ ಕ್ಷೇತ್ರೋತ್ಸವ ಹಾಗೂ ತಾಂತ್ರಿಕ ಸಲಹೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ವಿಜ್ಞಾನಿ ಡಾ. ಪಾಲಯ್ಯ ಮಾತನಾಡಿ, ಸಮಗ್ರ ಕೀಟ ನಿರ್ವಹಣೆಗಾಗಿ ಹೊಲದ ಬದಿಗಳಲ್ಲಿ ಬಾರ್ಡರ್ ಬೆಳೆಗಳಾದ ಅಲಸಂದಿ, ಮೆಕ್ಕೆಜೋಳ, ಸಜ್ಜೆ ಹಾಗೂ ಅಲ್ಲಲ್ಲಿ ಚೆಂಡು ಹೂವು ನೆಡುವುದರಿಂದ ನೈಸರ್ಗಿಕವಾಗಿ ಕೀಟಗಳನ್ನು ಹತೋಟಿಗೆ ತರಬಹುದು ಎಂದು ಮಾಹಿತಿ ನೀಡಿದರು.
ನಾಟಿ ಮಾಡಿದ 30 ದಿನಗಳ ನಂತರ ಎಕರೆಗೆ 10-15 ಅಂಟು ಬಲೆಗಳನ್ನು ಅಳವಡಿಸಲು ಅವರು ಸೂಚಿಸಿದರು.
ಮಣ್ಣು ವಿಜ್ಞಾನಿ ಡಾ. ರವಿ ಮಾತನಾಡಿ, ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ, ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಅಗತ್ಯವಿರುವ ಪೋಷಕಾಂಶಗಳನ್ನು ಮಾತ್ರ ಬಳಸಬೇಕು. ಒಮ್ಮೆ ಮಣ್ಣು ಪರೀಕ್ಷೆ ಮಾಡಿಸಿದರೆ ಮೂರು ವರ್ಷಗಳವರೆಗೆ ವೈಜ್ಞಾನಿಕವಾಗಿ ಗೊಬ್ಬರ ನಿರ್ವಹಣೆ ಮಾಡಲು ಸಾಧ್ಯ ಎಂದರು.
ಡಾ. ಗೋವಿಂದಪ್ಪ ಅವರು ರೋಗ ಮತ್ತು ಕೀಟಗಳನ್ನು ನರ್ಸರಿ ಹಂತದಿಂದಲೇ ಗುರುತಿಸಿ, ಬಯೋ ಜೀವಿಗಳಾದ ಸುಡೋಮೋನಾಸ್ ಮತ್ತು ಟ್ರೈಕೋಡರ್ಮ ಬಳಸುವಂತೆ ವಿವರಿಸಿದರು.
ತಾಲೂಕು ತೋಟಗಾರಿಕೆ ನಿರ್ದೇಶಕ ಜಾಡ್ರ ಶಂಕ್ರಪ್ಪ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ರಾಘವೇಂದ್ರ ಕೆ., ಪ್ರವೀಣ್ ಕುಮಾರ್ ಎನ್. ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.