ಬಳ್ಳಾರಿ | ಹೆಚ್‌ಪಿವಿ ಲಸಿಕೆ ಕುರಿತು ಮಾಹಿತಿ ನೀಡಿ : ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು
ವೈದ್ಯಾಧಿಕಾರಿಗಳಿಗೆ ಹೆಚ್‌ಪಿವಿ ಲಸಿಕೆ ತರಬೇತಿ ಕಾರ್ಯಾಗಾರ
ಬಳ್ಳಾರಿ, ಜ. 13: ಜಿಲ್ಲೆಯಲ್ಲಿ 9 ರಿಂದ 14 ವರ್ಷದೊಳಗಿನ ಶಾಲಾ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಯುವ ಉದ್ದೇಶದಿಂದ ಉಚಿತ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಲಸಿಕೆಯನ್ನು ನೀಡಲಾಗುತ್ತಿದೆ. ಈ ಕುರಿತು ಶಾಲಾ ಮಟ್ಟದಲ್ಲಿ ಇಂದಿನಿಂದಲೇ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ 'ಹೆಚ್‌ಪಿವಿ ಲಸಿಕೆ ತರಬೇತಿ ಕಾರ್ಯಾಗಾರ'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೆಣ್ಣುಮಕ್ಕಳ ಜೀವನಕ್ಕೆ ಮಾರಕವಾಗುವ ಮತ್ತು ದೀರ್ಘಕಾಲೀನ ಸಂಕಷ್ಟಕ್ಕೆ ಈಡುಮಾಡುವ ಗರ್ಭಕಂಠದ ಕ್ಯಾನ್ಸರ್ (Cervical Cancer) ನಿಯಂತ್ರಿಸಲು ರಾಜ್ಯ ಸರ್ಕಾರ ಈ ಮಹತ್ವದ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಲಸಿಕೆಯ ಮಹತ್ವದ ಕುರಿತು ಪೋಷಕರಿಗೂ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಹನುಮಂತಪ್ಪ ಮಾತನಾಡಿ, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಹೆಚ್.ಪಿ.ವಿ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ. 9 ರಿಂದ 14 ವರ್ಷದ ಹೆಣ್ಣುಮಕ್ಕಳಿಗೆ ವಯಸ್ಸಿಗನುಗುಣವಾಗಿ ಉಚಿತವಾಗಿ ಚುಚ್ಚುಮದ್ದು ನೀಡಲು ಮಾರ್ಗಸೂಚಿ ರೂಪಿಸಲಾಗಿದೆ ಎಂದರು.
ಎಸ್.ಎಂ.ಒ ಡಾ. ಶ್ರೀಧರ್ ಅವರು ಲಸಿಕೆ ನೀಡುವ ಸುರಕ್ಷಿತ ವಿಧಾನಗಳು, ಸೂಕ್ಷ್ಮ ಕ್ರಿಯಾ ಯೋಜನೆ (Micro Plan), ಹಾಗೂ ಲಸಿಕೆ ನಂತರದ ವರದಿ ನಿರ್ವಹಣೆಯ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು. ಪ್ರಸೂತಿ ತಜ್ಞ ಡಾ. ವೀರೇಂದ್ರಕುಮಾರ್ ಅವರು ವೈದ್ಯಾಧಿಕಾರಿಗಳಿಗೆ ರೋಗದ ಲಕ್ಷಣ ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ವಿವರಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಇಂದ್ರಾಣಿ, ಜಿಲ್ಲಾ ಅಸಾಂಕ್ರಮಿಕ ರೋಗಗಳ ನಿಯಂತ್ರಣ ಅಧಿಕಾರಿ ಡಾ.ವೀರೇಂದ್ರ ಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಭರತ್, ಡಾ.ಅರುಣ್ ಕುಮಾರ್, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಡಿಎನ್‌ಒ ಗಿರೀಶ್ ಸೇರಿದಂತೆ ಮಕ್ಕಳ ತಜ್ಞರು, ಪ್ರಸೂತಿ ತಜ್ಞರು, ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.