ಬಳ್ಳಾರಿ | ಜ.12ರಿಂದ ವಾಣಿಜ್ಯ ಪರೀಕ್ಷೆ; ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ : ಜಿಲ್ಲಾಧಿಕಾರಿ ಆದೇಶ
ಬಳ್ಳಾರಿ, ಜ.12 : ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಜನವರಿ 12ರಿಂದ 20ರವರೆಗೆ ವಾಣಿಜ್ಯ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷೆಗಳ ಸುಸೂತ್ರ ಹಾಗೂ ಪಾರದರ್ಶಕ ನಿರ್ವಹಣೆಯ ದೃಷ್ಟಿಯಿಂದ, ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 163ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಿಷೇಧಿತ ಪ್ರದೇಶವೆಂದು ಘೋಷಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಸೆಂಟರ್‌ಗಳು ಹಾಗೂ ಇಂಟರ್‌ನೆಟ್ ಸೆಂಟರ್‌ಗಳನ್ನು ಪರೀಕ್ಷಾ ಅವಧಿಯಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ, ನಿಷೇಧಿತ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿಗಳು ಹಾಗೂ ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದರೆ ಈ ಆದೇಶವು ಪರೀಕ್ಷಾ ಮೇಲ್ವಿಚಾರಣಾ ಕಾರ್ಯದಲ್ಲಿ ನಿರತರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.