Ballari | ಹೆಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಜಾಗೃತಿ

Update: 2026-08-22 19:26 IST

ಬಳ್ಳಾರಿ / ಕುರುಗೋಡು: ಹೆಚ್‌ಐವಿ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದೆ ಪ್ರತಿಯೊಬ್ಬರೂ ತಮ್ಮ ಹೆಚ್‌ಐವಿ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಬೇಕು ಎಂದು ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿ ಆಪ್ತ ಸಮಾಲೋಚಕ ಕರಿಬಸವ ಎನ್. ಕರೆ ನೀಡಿದರು.

ಕುರುಗೋಡು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೆ-ಸ್ಯಾಪ್ ಹಾಗೂ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಮೊಬಿಲೈಸೇಷನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ–2026’ ಹಾಗೂ ರಾಜ್ಯ ಮಟ್ಟದ ಮಾಸ್ಕಾಟ್ (ಲೋಗೋ) ಸ್ಪರ್ಧೆ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲೆ ಬಿ. ಶಾಂತಲಾ ಉದ್ಘಾಟಿಸಿದರು.

ಹೆಚ್‌ಐವಿ ಸೋಂಕಿನ ಬಗ್ಗೆ ಅರಿವು ಮೂಡಿಸಿದ ಕರಿಬಸವ ಎನ್., ಸರ್ಕಾರಿ ಆಸ್ಪತ್ರೆಗಳ ಐಸಿಟಿಸಿ, ಎಆರ್‌ಟಿ ಹಾಗೂ ಎಸ್ಬಿಐ ಕೇಂದ್ರಗಳಲ್ಲಿ ಸಂಪೂರ್ಣ ಗೌಪ್ಯತೆಯೊಂದಿಗೆ ಉಚಿತ ಹೆಚ್‌ಐವಿ ತಪಾಸಣೆ ಮತ್ತು ಆಪ್ತ ಸಮಾಲೋಚನೆ ಸೌಲಭ್ಯ ಲಭ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ (KSAPS) ಆಯೋಜಿಸಿರುವ ರಾಜ್ಯ ಮಟ್ಟದ ಮಾಸ್ಕಾಟ್ ಸ್ಪರ್ಧೆಯ ವಿವರಗಳನ್ನೂ ತಿಳಿಸಲಾಯಿತು. ಹೆಚ್‌ಐವಿ ತಡೆ, ಜಾಗೃತಿ ಮತ್ತು ಭರವಸೆಯನ್ನು ಪ್ರತಿಬಿಂಬಿಸುವ ಸ್ವಂತಿಕೆಯ ವಿನ್ಯಾಸಗಳನ್ನು ಆಹ್ವಾನಿಸಲಾಗಿದ್ದು, ವಿಜೇತರಿಗೆ 25 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಲಾಯಿತು. ಸ್ಪರ್ಧೆಗೆ ಆಗಸ್ಟ್ 31 ಕೊನೆಯ ದಿನವಾಗಿದೆ.

ಕಾರ್ಯಕ್ರಮದಲ್ಲಿ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ವೀರಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ವಿಶ್ವನಾಥ, ಪ್ರಥಮ ದರ್ಜೆ ಸಹಾಯಕ ಗಣೇಶ್, ಸ್ನೇಹಾ ಕ್ಲಿನಿಕ್ ಆಪ್ತ ಸಮಾಲೋಚಕ ಮಹಬೂಬ್ ಭಾಷಾ, ಸಿಬ್ಬಂದಿಗಳಾದ ಗೋವರ್ಧನ್, ಗಾದಿಲಿಂಗಪ್ಪ ಹಾಗೂ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News