ತುಂಗಭದ್ರಾ ಎಲ್‌ಎಲ್‌ಸಿ ಕಾಲುವೆಗೆ 90 ದಿನ ನೀರು ಹರಿಸಲು ಶಾಸಕ ಜೆ.ಎನ್.ಗಣೇಶ್ ಆಗ್ರಹ

Update: 2026-08-22 19:16 IST

ಬಳ್ಳಾರಿ / ಕಂಪ್ಲಿ: 2026–27ರ ಜಲವರ್ಷದಲ್ಲಿ ತುಂಗಭದ್ರಾ ಯೋಜನೆಯ ಕೆಳಮಟ್ಟದ ಕಾಲುವೆ (TBP LLC) ಕೋಟಾದಡಿ ತಕ್ಷಣ ನೀರು ಬಿಡುಗಡೆ ಮಾಡಬೇಕು. ಕೇವಲ 10 ದಿನವಲ್ಲ, ಆಂಧ್ರಪ್ರದೇಶವು ತನ್ನ ಪಾಲಿನ ನೀರನ್ನು ನಿರಂತರ 90 ದಿನಗಳ ಕಾಲ ಹರಿಸಬೇಕು ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಆಗ್ರಹಿಸಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ವಿಧಾನಸಭೆ ಅಧಿವೇಶನದಲ್ಲಿ ತುಂಗಭದ್ರಾ ಜಲಾಶಯದ ಬಲದಂಡೆಯ ಎಲ್‌ಎಲ್‌ಸಿ ಕಾಲುವೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಎರಡೂ ರಾಜ್ಯಗಳ ಕೋಟಾದಡಿ ನೀರು ಹರಿಸುವಂತೆ ಸರ್ಕಾರದ ಗಮನ ಸೆಳೆದಿದ್ದೆ ಎಂದು ಹೇಳಿದರು.

ಆಂಧ್ರಪ್ರದೇಶ ಸರ್ಕಾರ ಆ.22ರಿಂದ 31ರವರೆಗೆ 10 ದಿನಗಳ ಕಾಲ 600 ಕ್ಯೂಸೆಕ್ ನೀರು ತೆಗೆದುಕೊಳ್ಳಲು ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಇದರಿಂದ ಮಾತ್ರ ಕರ್ನಾಟಕದ ರೈತರಿಗೆ ಪ್ರಯೋಜನವಾಗುವುದಿಲ್ಲ. 10 ದಿನಗಳ ಬದಲು 90 ದಿನಗಳ ಕಾಲ ಎರಡೂ ರಾಜ್ಯಗಳ ಕೋಟಾದಡಿ ನೀರು ಹರಿಸಿದಾಗ ಮಾತ್ರ ಎಲ್‌ಎಲ್‌ಸಿ ವ್ಯಾಪ್ತಿಯ ಉಪ ಕಾಲುವೆಗಳು ಮತ್ತು ತೂಬುಗಳಿಗೆ ಸಮರ್ಪಕವಾಗಿ ನೀರು ತಲುಪಲಿದೆ ಎಂದು ತಿಳಿಸಿದರು.

ಈ ಭಾಗದ ರೈತರು ನೀರಿನ ಕೊರತೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಭತ್ತದ ಸಸಿ ಮಡಿಗಳು ಅವಧಿ ಮೀರಿ ನಾಟಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಆಂಧ್ರಪ್ರದೇಶ ತನ್ನ ಪಾಲಿನ ನೀರನ್ನು ತೆಗೆದುಕೊಳ್ಳದ ಕಾರಣ ಕರ್ನಾಟಕದ ಪಾಲಿನ ನೀರು ಕೆಳಮಟ್ಟದ ಉಪ ಕಾಲುವೆಗಳಿಗೆ ತಲುಪುತ್ತಿಲ್ಲ ಎಂದು ಹೇಳಿದರು.

ಆಂಧ್ರಪ್ರದೇಶವು ಮಂಡಳಿಯ ಸ್ಲೂಯಿಸ್‌ಗಳಿಗೆ 90 ಕ್ಯೂಸೆಕ್ ಹಾಗೂ ತನ್ನ ವ್ಯಾಪ್ತಿಯ ಟಿಬಿಪಿ ಎಲ್‌ಎಲ್‌ಸಿ ಪ್ರದೇಶಕ್ಕೆ 580 ಕ್ಯೂಸೆಕ್ ಸೇರಿದಂತೆ ಒಟ್ಟು ನೀರನ್ನು ನಿರಂತರ 90 ದಿನ ಹರಿಸುವ ವ್ಯವಸ್ಥೆ ಮಾಡಬೇಕು. ಆಗ ಮಾತ್ರ ಬಳ್ಳಾರಿ ಜಿಲ್ಲೆಯ ನಾಲ್ಕು ತಾಲೂಕುಗಳ ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಶಾಸಕ ಜೆ.ಎನ್. ಗಣೇಶ್ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News