ಬಳ್ಳಾರಿ | ಭತ್ತದ ಬೆಳೆಯಲ್ಲಿ ದುಂಡಾಣು ಮಚ್ಚೆ ರೋಗ ನಿರ್ವಹಣೆಗೆ ಮುಂಜಾಗ್ರತಾ ಕ್ರಮವಹಿಸಲು ಕೃಷಿ ಉಪನಿರ್ದೇಶಕ ಮಂಜುನಾಥ ಸಲಹೆ
ಬಳ್ಳಾರಿ : ಜಿಲ್ಲೆಯ ವಿವಿಧೆಡೆ ಭತ್ತದ ಬೆಳೆಯಲ್ಲಿ ದುಂಡಾಣು ಮಚ್ಚೆ ರೋಗ ಕಾಣಿಸಿಕೊಂಡಿದ್ದು, ರೈತರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯ ಉಪನಿರ್ದೇಶಕ ಎಸ್.ಎನ್. ಮಂಜುನಾಥ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಅವರು ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದ ಭತ್ತದ ಹೊಲಗಳನ್ನು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಸದ್ಯಕ್ಕೆ ಈ ಭಾಗದಲ್ಲಿ ದುಂಡಾಣು ಮಚ್ಚೆ ರೋಗದ ತೀವ್ರ ಲಕ್ಷಣಗಳು ಕಂಡುಬಂದಿಲ್ಲ. ಆದರೆ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಹಲವೆಡೆ ರೈತರು ಭತ್ತವನ್ನು ವ್ಯಾಪಕವಾಗಿ ಬೆಳೆದಿರುವುದರಿಂದ, ಈ ರೋಗದ ನಿಯಂತ್ರಣ ಕುರಿತು ಎಲ್ಲರೂ ಎಚ್ಚರಿಕೆಯಿಂದಿರಬೇಕು ಎಂದರು.
ಈ ರೋಗದ ಪ್ರಾರಂಭಿಕ ಹಂತದಲ್ಲಿ ಎಲೆಗಳ ಮೇಲೆ ತೇವಯುಕ್ತ ಕಂದು ಬಣ್ಣದ ಗೆರೆಗಳು ಕಾಣುತ್ತವೆ. ನಂತರ ಅವು ಹಳದಿಯಾಗಿ, ತೀವ್ರವಾದಾಗ ಎಲೆಗಳು ಸಂಪೂರ್ಣವಾಗಿ ಸುಟ್ಟಂತೆ ಕಾಣಿಸುತ್ತವೆ. ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಾದಾಗ ರೋಗ ವೇಗವಾಗಿ ಪಸರಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ರೋಗ ನಿಯಂತ್ರಣ ಕ್ರಮವಾಗಿ, ಪ್ರಾರಂಭಿಕ ಹಂತದಲ್ಲಿ ಬ್ಯಾಕ್ಟೀರಿಯನಾಶಕ 0.5 ಗ್ರಾಂ/ಲೀಟರ್ ಮತ್ತು ತಾಮ್ರ ಆಕ್ಸಿಕ್ಲೋರೈಡ್ 2.5 ಗ್ರಾಂ/ಲೀಟರ್ ಮಿಶ್ರಣಕ್ಕೆ ಅಂಟು ದ್ರಾವಣ ಸೇರಿಸಿ ಸಿಂಪಡಣೆ ಮಾಡಬೇಕು ಎಂದು ಸಲಹೆ ನೀಡಿದರು.
ರೋಗ ತೀವ್ರಗೊಂಡರೆ ಸ್ಟ್ರೆಪ್ಟೊಸೈಕ್ಲಿನ್ ಸಲ್ಫೇಟ್ 0.5 ಗ್ರಾಂ/ಲೀಟರ್ ಮತ್ತು ತಾಮ್ರ ಆಕ್ಸಿಕ್ಲೋರೈಡ್ 2.5 ಗ್ರಾಂ/ಲೀಟರ್ ಮಿಶ್ರಣವನ್ನು ತೆನೆ ಒಡೆಯದ ಬೆಳೆಗೆ ಸಿಂಪಡಿಸಬೇಕು. ತೆನೆ ಬಿಚ್ಚುವ ಅಥವಾ ಹಾಲು ತುಂಬುವ ಹಂತದಲ್ಲಿರುವ ಬೆಳೆಗೆ ಸ್ಟ್ರೆಪ್ಟೊಸೈಕ್ಲಿನ್ ಸಲ್ಫೇಟ್ 0.5 ಗ್ರಾಂ/ಲೀಟರ್ ಮತ್ತು ಕಾರ್ಬೆಂಡಜಿಮ್ 1 ಗ್ರಾಂ/ಲೀಟರ್ ದ್ರಾವಣವನ್ನು ಒಂದು ಎಕರೆಗೆ 180–200 ಲೀಟರ್ ಪ್ರಮಾಣದಲ್ಲಿ ಸಿಂಪಡಿಸುವಂತೆ ಹೇಳಿದರು.
ಸಿಂಪಡಣೆಯಾದ ಎರಡನೇ ದಿನ, ಪ್ರತಿ ಲೀಟರ್ ನೀರಿಗೆ ಲಘು ಪೋಷಕಾಂಶ ಮಿಶ್ರಣ 3 ಗ್ರಾಂ ಸೇರಿಸಿ ಸಿಂಪಡಣೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ, ಕುಂಠಿತ ಬೆಳೆಯನ್ನು ಪುನಶ್ಚೇತನಗೊಳಿಸಬಹುದು ಎಂದು ಮಂಜುನಾಥ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ, ಹೋಬಳಿ ಕೃಷಿ ಅಧಿಕಾರಿ ಬಸವರಾಜ ಸಿಂಧಿಗೇರಿ ಹಾಗೂ ಸ್ಥಳೀಯ ರೈತರು ಉಪಸ್ಥಿತರಿದ್ದರು.