×
Ad

ಬಳ್ಳಾರಿ | ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬಾರದು : ಮಹಮ್ಮದ್ ಹಾರೀಸ್ ಸುಮೇರ್

Update: 2025-10-06 20:27 IST

ಬಳ್ಳಾರಿ: ಎರಡು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕೆಮ್ಮಿನ ಸಿರಪ್ ನೀಡಬಾರದು, ಹಾಗೂ 2–5 ವರ್ಷದೊಳಗಿನ ಮಕ್ಕಳಿಗೆ ಮಾತ್ರ ತಜ್ಞ ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಕೆಮ್ಮಿನ ಔಷಧಿಗಳನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ತಿಳಿಸಿದ್ದಾರೆ.

ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ನಿವಾರಣೆಗೆ ನೀಡಿದ “ಕೋಲ್ಡಿಫ್ ಸಿರಪ್” ಸೇವನೆಯಿಂದ ಸಾವಿನ ಘಟನೆಗಳು ನಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಬಳ್ಳಾರಿ ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು, ಖಾಸಗಿ ಆಸ್ಪತ್ರೆಗಳು ಈ ಔಷಧಿಯನ್ನು ನಿಗಾವಹಿಸಲು, ಹಾಗೂ ಔಷಧಿ ಅಂಗಡಿಗಳ ಮಾರಾಟಗಾರರು ತಮ್ಮ ಬಳಿ ಇದ್ದರೆ ಮಾರಾಟ ಮಾಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ನೀಡಿದ ನಿರ್ದೇಶನ ಮತ್ತು ಸರ್ಕಾರದ ಆದೇಶದಂತೆ, ಸೆಕ್ಷನ್ 26(ಎ) ಡ್ರಗ್ ಅಂಡ್ ಕಾಸ್ಮೇಟಿಕ್ಸ್ ಆಕ್ಟ್ 1940 (23 ಆಪ್ 1940) ರ ಅನ್ವಯ, 4 ವರ್ಷದೊಳಗಿನ ಮಕ್ಕಳಿಗೆ ಕ್ಲೋರೋಫೆನಿರಮೈನ್ ಮಲೇಟ್ ಮತ್ತು ಫಿನೈಲ್‌ಫ್ರೀನೆ ಹೈಡ್ರೋಕ್ಲೋರೈಡ್ ಸಂಯೋಜಿತ ಸಿರಪ್ ನೀಡಲು, ವಿತರಿಸಲು ನಿಷೇಧವಿದೆ. ಜಿಲ್ಲೆಯಲ್ಲಿ ಈ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.

ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು ಎಲ್ಲರಿಗೂ ವೈದ್ಯರ ಸೂಚನೆಯಂತೆ ಮಾತ್ರ ಕೆಮ್ಮಿನ ಔಷಧಿಗಳನ್ನು ಬಳಸಲು ಶಿಫಾರಸು ಮಾಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ “ಕೋಲ್ಡಿಫ್ ಸೀರಪ್” ಸರಬರಾಜಾಗಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ಸಾರ್ವಜನಿಕರಿಗೆ ಜಿಲ್ಲಾದ್ಯಂತ ಜಾಗೃತಿ ನೀಡುತ್ತಿದ್ದಾರೆ. ಆಸ್ಪತ್ರೆಗಳಿಗೆ ಬರುವ ಸಾರ್ವಜನಿಕರು ವೈದ್ಯರ ಸೂಚನೆಗಳನ್ನು ಅನುಸರಿಸಿ ಔಷಧಿಗಳನ್ನು ಮಾತ್ರ ಬಳಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ ಬಾಬು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News