×
Ad

ಬಳ್ಳಾರಿ | ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ

Update: 2025-07-08 16:33 IST

ಬಳ್ಳಾರಿ : ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದ್ದು, ನೆರೆ ಪ್ರವಾಹ ನಿರ್ವಹಿಸಲು ಅಗತ್ಯ ಸಿದ್ಧತೆ ಮಾಡಿಟ್ಟುಕೊಳ್ಳಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಅವರು ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ʼಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆʼಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಬಾರಿ ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ಆಣೆಕಟ್ಟೆ ಜಲಾಶಯವು ನಿಗಧಿತ ವೇಳೆ ಮುಂಚಿತವಾಗಿಯೇ ಭರ್ತಿಯಾಗಿದೆ. ಮುಖ್ಯವಾಗಿ ಈ ಬಾರಿ ಕೇವಲ 80 ರಿಂದ 85 ಟಿಎಂಸಿ ನೀರನ್ನು ಉಳಿಸಿಕೊಳ್ಳಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದ್ದೆ. ಹಾಗಾಗಿ ಪ್ರವಾಹಕ್ಕೀಡಾಗುವ ನದಿ ಪಾತ್ರದ ಗ್ರಾಮಗಳನ್ನು ಸುರಕ್ಷಿತ ಸ್ಥಳದೆಡೆಗೆ ಸ್ಥಳಾಂತರಿಸಬೇಕು ಎಂದು ಕಂಪ್ಲಿ ಮತ್ತು ಸಿರುಗುಪ್ಪ ತಾಲ್ಲೂಕು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಪರಮೇಶ್ ಅವರು ಮಾತನಾಡಿ, ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 76.731 ಟಿಎಂಸಿ ನೀರು ಸಂಗ್ರಹವಿದ್ದು, 54,550 ಕ್ಯೂಸೆಕ್ ನೀರು ಒಳಹರಿವು ಇದ್ದು, 61,645 ಕ್ಯೂಸೆಕ್ ನೀರು ಹೊರಹರಿವು ಇದೆ ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿಯವರು ಚರ್ಚಿಸಿ, ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮುಹಮ್ಮದ್ ಝುಬೇರ್ ಎನ್., ಡಿಡಿಎಲ್‌ಆರ್ ಪ್ರಮೋದ್, ಲೋಕೋಪಯೋಗಿ ಇಲಾಖೆ, ಪಶುಸಂಗೋಪನೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಐದು ತಾಲ್ಲೂಕುಗಳ ತಹಶೀಲ್ದಾರರು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News